ಹತ್ಯೆ, ಹಲ್ಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ
ಎ.ಕೆ.ಸುಬ್ಬಯ್ಯ ಒತ್ತಾಯ

ಮಡಿಕೇರಿ, ಸೆ.15: ಕುಶಾಲನಗರದ ಆಟೊ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಕಗ್ಗೋಡ್ಲುವಿನಲ್ಲಿ ಜಾನುವಾರು ಸಾಗಾಟದ ಸಂದರ್ಭ ನಡೆದ ಹಲ್ಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ವಕೀಲ ಎ.ಕೆ.ಸುಬ್ಬಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪೊಲೀಸರು ಸಂಘ ಪರಿವಾರದ ಪರ ಇರುವುದರಿಂದ ಈ ಎರಡು ಪ್ರಕರಣಗಳ ಪೊಲೀಸ್ ತನಿಖೆಯ ಬಗ್ಗೆ ನಂಬಿಕೆ ಇಲ್ಲವೆಂದು ಆರೋಪಿಸಿದರು. ರಾಜ್ಯ ಸರಕಾರ ತಕ್ಷಣ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಗ್ಗೋಡ್ಲುವಿನ ಗಣಪತಿ ಎಂಬವರಿಂದ ಕೊಂಡಂಗೇರಿಯ ವ್ಯಕ್ತಿಯೊಬ್ಬರು ಜಾನುವಾರುಗಳನ್ನು ಖರೀದಿಸಿದ್ದು, ಅದನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಸುಮಾರು 20 ಮಂದಿಯ ಗುಂಪು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ, ಗುಂಡು ಹಾರಿಸಿದೆ.
ಈ ಬಗ್ಗೆ ದೂರು ನೀಡಲು ಮಡಿಕೇರಿ ಗ್ರಾಮಾಂತರ ಠಾಣೆಗೆ ಹಲ್ಲೆಗೊಳಗಾದವರು ತೆರಳಿದ ಸಂದರ್ಭ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ. ಕೆಲವರು ಪ್ರತಿಭಟನೆ ನಡೆಸಿದ ನಂತರ ದೂರನ್ನು ದಾಖಲಿಸಿಕೊಳ್ಳಲಾಗಿದೆಯಾದರೂ ಯಾರನ್ನೂ ಇಲ್ಲಿಯವರೆಗೆ ಬಂಧಿಸಿಲ್ಲ. ಪೊಲೀಸರು ಪ್ರಕರಣವನ್ನೇ ದಾಖಲಿಸಲು ಹಿಂದೇಟು ಹಾಕಿರುವುದನ್ನು ಗಮನಿಸಿದರೆ ಜಿಲ್ಲೆಯ ಪೊಲೀಸರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಬಗ್ಗೆ ಸಂಶಯವಿದೆ. ಅದರಲ್ಲೂ ಟಿಪ್ಪುಜಯಂತಿಯ ಬಳಿಕ ಪೊಲೀಸರು ಸಂಪೂರ್ಣವಾಗಿ ಸಂಘಪರಿವಾರದ ಪರವಾಗಿದ್ದು, ಅಲ್ಪಸಂಖ್ಯಾತರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಶಾಲನಗರದ ಆಟೊ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಗೆ ಕಲ್ಲು ತೂರಿದ್ದೇ ಹತ್ಯೆಗೆ ಕಾರಣವೆಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಎದುರೇ ಕಲ್ಲು ತೂರಾಟ ನಡೆದಿದ್ದರೂ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಕಲ್ಲುತೂರಿದವರನ್ನು ಬಂಧಿಸುವಂತೆ ಒತ್ತಾಯಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಸಲಾಗಿದೆ ಎಂದು ಸುಬ್ಬಯ್ಯ ಆರೋಪಿಸಿದರು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಸ್ತುತ ಜಿಲ್ಲೆಯಲ್ಲಿರುವ ಪೊಲೀಸರಿಂದ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುವುದಿಲ್ಲವೆಂದು ಟೀಕಿಸಿದ ಅವರು ಎರಡೂ ಪ್ರಕರಣಗಳನ್ನು ಸಿಐಡಿಗೆ ಒಪ್ಪಿಸುವುದು ಸೂಕ್ತವೆಂದರು.
ಗೋರಕ್ಷಕರಿಗೆ ಶರಣಾಗುವೆ: ಇತ್ತೀಚೆಗೆ ಜಿಲ್ಲೆಯ ಕಡಂಗದಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಮೈಸೂರಿನ ಪಿಂಜರಾಪೋಲ್‌ಗೆ ಸಾಗಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ವಶವಾದ ಜಾನುವಾರುಗಳು ಪ್ರಸ್ತುತ ಪಿಂಜರಾಪೋಲ್‌ನಲ್ಲಿ ಸುರಕ್ಷಿತವಾಗಿದ್ದಲ್ಲಿ ಗೋರಕ್ಷಕರಿಗೆ ಶರಣಾಗುವುದಾಗಿ ತಿಳಿಸಿದ ಎ.ಕೆ.ಸುಬ್ಬಯ್ಯ ಜಾನುವಾರುಗಳು ಜೀವಂತವಾಗಿ ಉಳಿದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋರಕ್ಷಕರ ವಿರುದ್ಧ ಕಠಿಣ ಮಾತುಗಳನ್ನಾಡಿದ್ದರು, ಅಲ್ಲದೆ ಮೋದಿ ಅವರ ಮಾತಿಗೆ ಪೂರಕವಾದ ಹೇಳಿಕೆಯನ್ನು ಆರೆಸ್ಸೆಸ್ ಕೂಡ ನೀಡಿತ್ತು. ಆದರೆ ಇದಾದ ನಂತರ ನಕಲಿ ಗೋರಕ್ಷಕರ ದಾಳಿ ಹೆಚ್ಚಾಗಿದೆ. ಇದಕ್ಕೆ ಕೇಂದ್ರ ಸರಕಾರದ ಪರೋಕ್ಷ ಬೆಂಬಲವೇ ಕಾರಣವೆಂದು ಸುಬ್ಬಯ್ಯ ಆರೋಪಿಸಿದರು.
ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಗೋಮಾಂಸ ರಫ್ತು ಮಾಡುವ ಕಂಪೆನಿಗಳೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿವೆ ಎಂದು ಟೀಕಿಸಿದ ಅವರು, ಗೋಮಾಂಸ ರಫ್ತು ಮಾಡುವುದನ್ನು ಸರಕಾರ ಮೊದಲು ನಿಲ್ಲಿಸಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಕೆ.ಆರ್.ವಿದ್ಯಾಧರ್ ಹಾಗೂ ಪಿ.ಸಿ.ಹಸೈನಾರ್ ಉಪಸ್ಥಿತರಿದ್ದರು.







