ಅಂತಾರಾಜ್ಯ ಡಕಾಯಿತರ ಬಂಧನ: 29.73ಲಕ್ಷ ರೂ. ವಶ

ವೀರಾಜಪೇಟೆ,ಸೆ.15: ಕಳೆದ ತಿಂಗಳು ದ.ಕೊಡಗಿನ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್‌ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ ವೀರಾಜಪೇಟೆ ಪೊಲೀಸ್ ತಂಡ 7ಮಂದಿ ಅಂತಾರಾಜ್ಯ ಡಕಾಯಿತರನ್ನು ಬಂಧಿಸಿ ಅವರ ಬಳಿ ಇದ್ದ 29,73,000 ರೂ.ವನ್ನು ಹಾಗೂ ಡಕಾಯಿತಿಗೆ ಬಳಸಿದ 2ಕಾರು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಆ.16ರಂದು ಮಧ್ಯ ರಾತ್ರಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೇರಳದ ತಾಮರಚೇರಿಗೆ ಹೋಗುತ್ತಿದ್ದ ಕೆ.ಎಲ್-57 ಎಂ-2587 ಇನೋವಾ ಕಾರನ್ನು ಹಿಂಬಾಲಿಸಿ ಬಂದ 16ಮಂದಿ ಅಪರಿಚಿತರ ತಂಡ ರಾತ್ರಿ 12:45 ಕ್ಕೆ ನಾಲ್ಕೇರಿ ಜಂಕ್ಷನ್‌ನಲ್ಲಿ ಕಾರನ್ನು ತಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಸೀಫ್ ಎಂಬವರನ್ನು ಕಾರಿನಿಂದ ಎಳೆದೊಯ್ದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕಾರಿನಲ್ಲಿದ್ದ 38ಲಕ್ಷ ರೂ.ವನ್ನು ದೋಚಿದ್ದರು. ಆಸೀಫ್‌ನ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಡಕಾಯಿತರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಝೈಲೋ ಕಾರಿನಲ್ಲಿ ಬಂದ ಸುಮಾರು 10ಮಂದಿ, ವೇಗನಾರ್‌ನಲಿದ್ದ್ಲ 4ಮಂದಿ, ಪಲ್ಸ್‌ರ್ ಬೈಕ್‌ನಲ್ಲಿದ್ದ ಇಬ್ಬರು ಸೇರಿದಂತೆ ಒಟ್ಟು 16ಮಂದಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದರು.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವೀರಾಜಪೇಟೆ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು. ತನಿಖೆಯ ವೇಳೆ ಸಿಕ್ಕಿದ ಸುಳಿವಿನ ಮೇರೆಗೆ ತಮಿಳುನಾಡು ರಾಜ್ಯದ ಸೇಲಂ ಪಟ್ಟಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಯಾದ ಕೇರಳದ ಇರಿಟ್ಟಿಯ ಚೀನಿಕಾಡು ಅಜಿತ್(28)ಎಂಬವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಒಟ್ಟು 16ಮಂದಿ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿತ್ತು.
ನಂತರ ತನಿಖಾ ತಂಡ ಅಜಿತ್ ಸೇರಿದಂತೆ ಒಟ್ಟು 7ಮಂದಿಯನ್ನು ಬಂಧಿಸಿ ದರೋಡೆ ಮಾಡಿ ಹಂಚಿಕೊಂಡಿದ್ದ ಹಣವನ್ನು ವಶಪಡಿಸಿಕೊಂಡಿದೆ. ಉಳಿದ ಹಣ ಇನ್ನು 9ಮಂದಿಯ ಬಳಿ ಇದ್ದು ಅವರ ವಿಳಾಸ ಹಾಗೂ ಇತರ ಮಾಹಿತಿಗಳು ತನಿಖಾ ತಂಡಕ್ಕೆ ಈಗಾಗಲೇ ದೊರೆತಿದ್ದು, ಸದ್ಯದಲ್ಲಿಯೇ ಇವರನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. 16ಮಂದಿ ಆರೋಪಿಗಳೆಲ್ಲರೂ ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದು, ಈ ಆರೋಪಿಗಳ ಮೇಲೆ ಕೇರಳ ರಾಜ್ಯದಲ್ಲಿಯೂ ಡಕಾಯಿತಿ ಹಾಗೂ ಇತರ ಕ್ರಿಮಿನಲ್ ಪ್ರ ಕರಣಗಳು ದಾಖಲಾಗಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಸಿನಿಮೀಯ ಮಾದರಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ತಂಡಕ್ಕೆ ಇಲಾಖೆ ವತಿಯಿಂದ 10,000 ರೂ, ನಗದು ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಈ ಸಂದಭರ್ದಲ್ಲಿ ತಿಳಿಸಿದರು.
ಈ ಪ್ರಕರಣದ ತನಿಖೆಗಾಗಿ ಪೊಲೀಸರ ತಂಡ ತಮಿಳುನಾಡು, ಕೇರಳದ ಕಣ್ಣಾನೂರು, ತಲಚೇರಿ, ಮಾನಂದವಾಡಿ ಹಾಗೂ ತಾಮರಚೇರಿಯಲ್ಲಿ ತೀವ್ರ ಶೋಧ ನಡೆಸಿತ್ತು.
ಅಜಿತ್ ನೀಡಿದ ಸುಳಿವಿನ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ವಿಶಾಕ್(27), ಶರಣು ಕುಮಾರ್(28), ನಿಖಿಲ್ ಕುಮಾರ್(25) ಅರುಣ್ ಕುಮಾರ್(27) ಮುನಾಫ್(26) ಶೌಕತ್(22) ಎಂಬವರನ್ನು ಬಂಧಿಸಲು ಸಾಧ್ಯವಾಗಿದೆ.
ವೀರಾಜಪೇಟೆ ಡಿವೈಎಸ್ಪಿ. ನಾಗಪ್ಪ ಅವರ, ನೇತೃತ್ವದ ತಂಡದಲ್ಲಿ ಕುಟ್ಟ ಸರ್ಕಲ್ ಇನ್‌ಸ್ಪೆಕ್ಟರ್ ದಿವಾಕರ್, ಗೋಣಿಕೊಪ್ಪ ಎಸೈ ಪಿಕೆ.ರಾಜು, ವೀರಾಜಪೇಟೆ ಎಸೈ ಶಾಂತಮಲ್ಲಪ್ಪ, ಶ್ರೀಧರ್, ರವಿಕಿರಣ್, ಸಿಬ್ಬಂದಿಯಾದ ದೊಡ್ಡಯ್ಯ, ಟಿ.ಕೆ.ರವಿ, ದೇವರಾಜ್, ಎಂ.ಎಸ್.ರಂಜಿತ್, ಶರತ್, ಗಣೇಶ್,ಗಣಪತಿ ಸಿದ್ದಾರ್ಥ, ಧನಂಜಯ್ಯ, ಮಜೀದ್, ಕೃಷ್ಣಮೂರ್ತಿ, ಸುಕುಮಾರ್, ರಮೇಶ್, ವಿರೇಶ್ ಹಾಗೂ ರಾಮಕೃಷ್ಣ ಆರೋಪಿಗಳನ್ನು ಪತ್ತೆ ಹಚ್ಚಲು ಭಾಗಿಯಾಗಿದ್ದರು.







