ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು
ತಡೆಗೋಡೆ ನಿರ್ಮಾಣ ಆದೇಶವನ್ನು ಪಾಲಿಸದ ನೀರಾವರಿ ಇಲಾಖೆ

ದಾವಣಗೆರೆ,ಸೆ.15: ಕೆರೆಗಳಿಗೆ ನೀರು ತುಂಬಿಸುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಗೆ ತಾತ್ಕಾಲಿಕ ಗೋಡೆ ನಿರ್ಮಿಸಿ ಎಂದು ನೀರಾವರಿ ಇಲಾಖೆಗೆ ಆದೇಶ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು 22 ಕೆರೆಗಳ ಏತನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಗುರುವಾರ ನೀರಾವರಿ ಇಲಾಖೆ ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಇತ್ತೀಚೆಗೆ ತರಳಬಾಲು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್.ಮಲ್ಲಿಕಾರ್ಜುನ್‌ರವರ ಸಮ್ಮುಖದಲ್ಲಿ ಸಭೆ ನಡೆಸಿ, ಜನ ಜಾನುವಾರುಗಳಿಗೆ ಸಹಾಯಕವಾಗುವಂತೆ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‌ವೆಲ್ 1ರ ಬಳಿ 22 ಕೆರೆಗಳಲ್ಲಿ ನೀರು ತುಂಬಿಸುವ ಉದ್ದೇಶದಿಂದ ತುಂಗಭದ್ರಾ ನದಿಗೆ ತಾತ್ಕಾಲಿಕ ಗೋಡೆ ನಿರ್ಮಿಸಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಕಳೆದ ಒಂದು ವಾರದಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಕಾಮಗಾರಿ ಕ್ರಮ ಕೈಗೊಂಡಿಲ್ಲ ಎಂದು ಆಗ್ರಹಿಸಿದರು. ಇನ್ನೂ ಸ್ವಾಮೀಜಿ ಮತ್ತು ಸಚಿವರ ಸಮ್ಮುಖದಲ್ಲಿ ಸಭೆ ನಡೆಸುವಾಗ ನೀರಾವರಿ ಇಲಾಖೆಯು ಬೇಗನೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿತ್ತು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಈ ಯೋಜನೆಗೆ ಸುಮಾರು 20ರಿಂದ 25 ಲಕ್ಷ ರೂ. ವನ್ನು ನೀಡಿ ಕಾಮಗಾರಿ ಆರಂಭಿಸುವಂತೆ ಅನುಮತಿ ನೀಡಿ ಆದೇಶ ನೀಡಿದ್ದರು. ಆದರೆ, ನೀರಾವರಿ ಇಲಾಖೆ ಕಾಮಗಾರಿಗೆ ಮೀನಾಮೇಷ ಎಣಿಸುತ್ತಿದ್ದು, ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ದೂರಿದರು. ಈ ವೇಳೆ ನೀರಾವರಿ ಇಲಾಖೆಯ ಅಧಿಕಾರಿ ಕಲ್ಲಪ್ಪ ಮಾತನಾಡಿ, ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಕ್ರಿಯಾ ಯೋಜನೆ ನಿರ್ಮಿಸಲಾಗಿದೆ. ಅನುದಾನ ಬಂದಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದೆಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ 22 ಕೆರೆಗಳ ಏತನೀರಾವರಿ ಸಮಿತಿಯ ಅಧ್ಯಕ್ಷ ಡಾ. ಮಂಜುನಾಥ ಗೌಡ, ಸಮಿತಿಯ ಕಾರ್ಯದರ್ಶಿ ಕೊಟ್ರೇಶ್ ನಾಯ್ಕ್ಕಾ, ಅಶೋಕ್ ತುಪ್ಪದಹಳ್ಳಿ, ಹೊನ್ನಾಯಕನಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.





