ತಾಪಂ ಪರಿಶೀಲನಾ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಗೈರು
ಕಾರಣ ನೀಡುವಂತೆ ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ ನೋಟಿಸ್ ಜಾರಿ

ಕಾರವಾರ, ಸೆ.15: ತಾಪಂ ಕಚೇರಿ ಸಭಾ ಭವನದಲ್ಲಿ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಾಗದೆ ಇರುವ ಬಗ್ಗೆ ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ ಆಕ್ಷೇಪ ವ್ಯಕ್ತ ಪಡಿಸಿದರು. ಸಭೆಯಲ್ಲಿ ಮೀನುಗಾರಿಕಾ ಇಲಾಖೆ, ನಗರಸಭೆ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು. ಸಾರ್ವಜನಿಕರ ಸಮಸ್ಯೆಗಳನ್ನು ತರುವ ಜನಪ್ರತಿ ನಿಧಿಗಳ ದೂರುಗಳನ್ನು ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಈ ಹಿಂದೆ ನಡೆದ ಸಭೆಗಳಲ್ಲೂ ನಿರಂತರವಾಗಿ ಕೆಲ ಇಲಾಖೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಅಧಿಕಾರಿಗಳೇ ಬರದಿದ್ದರೆ ಯಾರ ಜೊತೆ ಚರ್ಚೆ ನಡೆಸಬೇಕು. ಸಭೆಗೆ ಬರದ ಅಧಿಕಾರಿಗಳಿಗೆ ಕಾರಣ ನೀಡುವಂತೆ ನೋಟಿಸ್ ನೀಡಿ ಮುಂಬರುವ ಸಭೆಗಳಿಗೆ ಹಾಜರಾಗುವಂತೆ ಸೂಚಿಸಿದರು. ಶಿಶು ಅಭಿವೃದ್ಧಿ ಇಲಾಖೆಯ ಪಿ.ಎಚ್.ನಾಯ್ಕ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ 5ಗ್ರಾಂ ಚಿಕ್ಕಿ ಪ್ರಮಾಣವನ್ನು 10ಗ್ರಾಂಗೆ ಏರಿಸಲಾಗಿದೆ. 120 ಅಂಗನವಾಡಿ ಕೇಂದ್ರಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಎರಡು ಸಿಲಿಂಡರ್ ನೀಡಲಾಗಿದೆ. ತಾಲೂಕಿನ ಹಲವಾರು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಗೆ ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಸೂರಜಾ ನಾಯ್ಕ, ಕಾರವಾರ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವೈದ್ಯರ ನೇಮಕಾತಿಯಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಅಕ್ಷರದಾಸೋಹದ ಶಾಂತಲಾ ನಾಯ್ಕ ಮಾತನಾಡಿ, 183 ಅಡುಗೆ ಕೇಂದ್ರಗಳಿಗೆ ಈಗಾಗಲೇ ಪಡಿತರ ಸಾಮಗ್ರಿ ವಿತರಣೆಯಾಗಿದೆ. 5 ಅಡುಗೆ ಕಟ್ಟಡಗಳು ನಿರ್ಮಾಣಗೊಂಡಿದೆ. ತಾಲೂಕಿನ ಎಲ್ಲ ಅಡುಗೆ ತಯಾರಕರಿಗೆ ಹಾಗೂ ಸಹಾಯಕರಿಗೆ ಸಂಬಳ ನೀಡಲಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಎಸ್.ವಿ.ನಾಯ್ಕ ಮಾತನಾಡಿ, ತಿಂಗಳ ಪೂರ್ತಿ ಪಡಿತರ ವಿತರಣೆ ಮಾಡಬೇಕು ಎಂದು ಸರಕಾರ ಆದೇಶಿಸಿದೆ. ಅದರಂತೆ ವಿತರಣೆಯಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ತಿಂಗಳು ಪೂರ್ತಿ ಜನರಿಗೆ ಪಡಿತರ ಲಭಿಸುತ್ತಿಲ್ಲ. ಕೆಲವೇ ದಿನದಲ್ಲಿ ಪಡಿತರ ಮುಗಿದಿದೆ ಎನ್ನುತ್ತಿದ್ದಾರೆ ಎನ್ನುವ ಆರೋಪವಿದೆ. ಈ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.







