ಸೆ.16ರಂದು ಸೌದಿ ಅರೇಬಿಯಕ್ಕೆ ತೆರಳಬೇಕಿದ್ದ ಜೋಕಟ್ಟೆ ನಿವಾಸಿ ನಾಪತ್ತೆ

ಮಂಗಳೂರು, ಸೆ. 15: ಸೆಪ್ಟಂಬರ್ 16ರಂದು ಸೌದಿ ಅರೇಬಿಯಾಕ್ಕೆ ತೆರಳಬೇಕಿದ್ದ ಜೋಕಟ್ಟೆಯ ನಿವಾಸಿ ಮುಹಮ್ಮದ್ ಅಬೂಬಕರ್ (48) ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮಾರು 20 ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಕೆಲವು ವರ್ಷಗಳ ಹಿಂದೆ ಸೌದಿ ಅರೇಬಿಯಾದ ಸೂಪರ್‌ಮಾರ್ಕೆಟ್‌ವೊಂದರ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸೌದಿಯಲ್ಲೇ ನೆಲೆಸಿದ್ದ ಅಬೂಬಕರ್ ತಿಂಗಳ ಹಿಂದಷ್ಟೇ ಊರಿಗೆ ಮರಳಿದ್ದರು. ಆದರೆ, ಕುಟುಂಬ ಸಮೇತರಾಗಿ ಅವರು ಸೆಪ್ಟಂಬರ್ 9ರಂದು ಮತ್ತೆ ಸೌದಿಗೆ ತೆರಳಬೇಕಾಗಿದ್ದು, ಅದಕ್ಕಾಗಿ ತನ್ನ ಸಹಿತ ಹೆಂಡತಿ ಮತ್ತು ಇಬ್ಬರು ಮಕ್ಕಳ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು.
ಆದರೆ, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹಬ್ಬವನ್ನು ಮುಗಿಸಿ ಹೋಗುವ ಬಗ್ಗೆ ಕುಟುಂಬ ನಿರ್ಧರಿಸಿದ್ದು, ಅದರಂತೆ ಟಿಕೆಟನ್ನು ಸೆ. 16ರಂದು ಮುಂದುವರಿಸಲು ಮತ್ತು ಅದಕ್ಕಾಗಿ ತಗಲುವ ಹೆಚ್ಚುವರಿ ಹಣವನ್ನು ಪಾವತಿಸಲೆಂದು ಜೋಗಟ್ಟೆಯಿಂದ ಮಂಗಳೂರಿಗೆ ತೆರಳಿದ್ದರೆಂದು ಹೇಳಲಾಗಿದೆ. ಮಂಗಳೂರಿಗೆ ತೆರಳಿದ್ದ ಅದೇ ದಿನದಂದೇ ಅವರು ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಣ0ಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.





