ಬ್ರೆಝಿಲ್ ಪ್ಯಾರಾಲಿಂಪಿಕ್ಸ್ ಫುಟ್ಬಾಲ್ ತಂಡದಲ್ಲಿ ಪ್ರತಿಭಾವಂತ ಅಂಧ ಆಟಗಾರ ಜೆಫಿನ್ಹೊ

ರಿಯೋ ಡಿಜನೈರೊ, ಸೆ.15: ಈಗ ನಡೆಯುತ್ತಿರುವ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಬ್ರೆಝಿಲ್‌ನ 5 ಆಟಗಾರರನ್ನು ಒಳಗೊಂಡ ಫುಟ್ಬಾಲ್ ತಂಡದಲ್ಲಿರುವ ಜೆಫರ್‌ಸನ್ ‘ಪ್ಯಾರಾಲಿಂಪಿಕ್ ಪೀಲೆ’ ಎಂದೇ ಖ್ಯಾತಿ ಪಡೆದಿದ್ದಾರೆ.
ಹುಟ್ಟುವಾಗ ಗ್ಲುಕೋಮಾ ಸಮಸ್ಯೆ ಎದುರಿಸಿದ್ದ ಜೆಫರ್‌ಸನ್ ಏಳರ ಹರೆಯದಲ್ಲಿ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರು. ದೃಷ್ಟಿ ಕಳೆದುಕೊಂಡ ಬಳಿಕ ಫುಟ್ಬಾಲ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ‘ಜೆಫಿನೊ’್ಹ ಖ್ಯಾತಿಯ ಜೆಫೆರ್‌ಸನ್ ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ಅವರ ಆಟದ ವಿಡಿಯೋವನ್ನು ನೋಡಿಲ್ಲ. ಆದರೆ, ಪೀಲೆ ಶೈಲಿಯಲ್ಲಿ ಆಡುವ ಮೂಲಕಎಲ್ಲರಿಂದ ‘ಪ್ಯಾರಾಲಿಂಪಿಕ್ಸ್ ಪೀಲೆ’ ಎಂದು ಕರೆಯಲ್ಪಡುತ್ತಿದ್ದಾರೆ. ಈ ವಾರ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಫುಟ್ಬಾಲ್ ಪಂದ್ಯದಲ್ಲಿ ಬ್ರೆಝಿಲ್ ತಂಡಕ್ಕೆ ಸತತ ಮೂರನೆ ಚಿನ್ನದ ಪದಕ ಗೆದ್ದುಕೊಡಲು ಎದುರು ನೋಡುತ್ತಿದ್ದಾರೆ.
‘‘ಪೀಲೆಯಂತಹ ಅಥ್ಲೀಟ್‌ರೊಂದಿಗೆ ನನ್ನನ್ನು ಹೋಲಿಸುತ್ತಿರುವುದು ನನಗೆ ಸಿಕ್ಕಿದ ಗೌರವ’’ ಎಂದು ಜೆಫಿನ್ಹೊ ಹೇಳಿದ್ದಾರೆ.
5 ಆಟಗಾರರನ್ನು ಒಳಗೊಂಡ ಫುಟ್ಬಾಲ್ ತಂಡದಲ್ಲಿ ನಾಲ್ವರು ಅಂಧ ಆಟಗಾರರು ಹಾಗೂ ಓರ್ವ ದೃಷ್ಟಿದೋಷವಿಲ್ಲದ ಗೋಲ್‌ಕೀಪರ್ ಇರುತ್ತಾರೆ. ಸಾಂಪ್ರದಾಯಿಕ ಫುಟ್ಬಾಲ್ ಪಿಚ್‌ಗಿಂತ ಚಿಕ್ಕದಾದ ಮೈದಾನವಿರುತ್ತದೆ. ಚೆಂಡು ಚಲಿಸುವಾಗ ಶಬ್ದ ಮಾಡುತ್ತದೆ. ಕೋಚ್‌ಗಳು ಆಟಗಾರರಿಗೆ ವೌಖಿಕ ಆಜ್ಞೆ ನೀಡುತ್ತಾರೆ.
‘‘ನಾನು ಪೀಲೆ ಆಡುವುದನ್ನು ನೋಡಿಲ್ಲ. ಆದರೆ, ಅವರೋರ್ವ ಅದ್ಭುತ ಆಟಗಾರ. ಜೆಫಿನ್ಹೊರನ್ನು ಪೀಲೆಗೆ ಹೋಲಿಕೆ ಮಾಡುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನನ್ನ ಪ್ರಕಾರ ಜೆಫಿನ್ಹೊ ಕೂಡ ಅತ್ಯುತ್ತಮ ಫುಟ್ಬಾಲ್ ಆಟಗಾರನಾಗಿದ್ದಾರೆ’’ ಎಂದು ಬ್ರೆಝಿಲ್ ಪ್ಯಾರಾಫುಟ್ಬಾಲ್ ತಂಡದ ಕೋಚ್ ಫ್ಯಾಬಿಯೊ ವಾಸ್ಕೊಸೆಲ್ಲೊಸ್ ಹೇಳಿದ್ದಾರೆ.
17ರ ಹರೆಯದಲ್ಲಿ ಬ್ರೆಝಿಲ್ ತಂಡವನ್ನು ಸೇರ್ಪಡೆಯಾಗಿರುವ 26ರ ಪ್ರಾಯದ ಜೆಫಿನ್ಹೊ 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್ ತಂಡ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ತಂಡದ ನಾಯಕತ್ವವಹಿಸಿಕೊಂಡಿದ್ದರು. ಶುಕ್ರವಾರ ನಡೆಯಲಿರುವ ರಿಯೋ 2016ರ ಸೆಮಿಫೈನಲ್‌ನಲ್ಲಿ ಬ್ರೆಝಿಲ್ ತಂಡ ಚೀನಾದ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು ಆಡಲಿದೆ. ಶನಿವಾರ ಕಂಚು ಹಾಗೂ ಚಿನ್ನದ ಪದಕಕ್ಕಾಗಿ ಪಂದ್ಯ ನಡೆಯುತ್ತವೆ.







