ಭಾರತ-ಸ್ಪೇನ್ ಸೆಣಸಾಟ, ನಡಾಲ್ ಆಕರ್ಷಣೆ
ಇಂದು ದಿಲ್ಲಿಯಲ್ಲಿ ಡೇವಿಸ್ ಕಪ್ ಆರಂಭ

ಹೊಸದಿಲ್ಲಿ, ಸೆ.15: ಸುಮಾರು 51 ವರ್ಷಗಳ ಬಳಿಕ ಭಾರತ ತಂಡ ಸ್ಪೇನ್ ವಿರುದ್ಧ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಪಂದ್ಯ(ಎಲಿಮಿನೇಶನ್ ರೌಂಡ್) ಆತಿಥ್ಯವಹಿಸಿಕೊಂಡಿದ್ದು, ಟೂರ್ನಿಯು ಸೆ.16 ರಿಂದ 18ರ ತನಕ ನಡೆಯಲಿದೆ. ಐದು ಬಾರಿ ಡೇವಿಸ್ ಕಪ್ ಜಯಿಸಿರುವ ಸ್ಪೇನ್ ತಂಡದಲ್ಲಿ ಈ ಬಾರಿ ರಫೆಲ್ ನಡಾಲ್ ಆಡುತ್ತಿದ್ದಾರೆ.
ಡೇವಿಡ್ ಫೆರರ್(ವಿಶ್ವದ ನಂ.13) ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ಸ್ ಫೆಲಿಸಿಯಾನೊ ಲೊಪೆಝ್( ವಿಶ್ವದ ನಂ.26) ಹಾಗೂ ಮಾರ್ಕ್ ಲೊಪೆಝ್(ಡಬಲ್ಸ್‌ನಲ್ಲಿ ವಿಶ್ವದ ನಂ.15) ಕೂಡ ಸ್ಪೇನ್ ತಂಡದಲ್ಲಿದ್ದು ಭಾರತದ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ.
ಆದರೆ, ಭಾರತ ತಂಡದಲ್ಲಿ ಲಿಯಾಂಡರ್ ಪೇಸ್ ಹೊರತುಪಡಿಸಿದರೆ, ಉಳಿದ ಆಟಗಾರರು ಅನನುಭವಿಗಳು. ಸಿಂಗಲ್ಸ್ ಆಟಗಾರರಾದ ಸಾಕೇತ್ ಮೈನೇನಿ(4) ಹಾಗು ರಾಮ್‌ಕುಮಾರ್ ರಾಮನಾಥನ್(1) ಒಟ್ಟಿಗೆ ಐದು ಡೇವಿಸ್ ಕಪ್ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಇವರು ವಿಶ್ವಶ್ರೇಷ್ಠ ಆಟಗಾರರ ವಿರುದ್ಧ ಆಡಬೇಕಾಗಿದೆ. ಈ ಮೂಲಕ ಪಾಠ ಕಲಿಯಬೇಕಾಗಿದೆ.
ಭಾರತದ ಟೆನಿಸ್ ಅಭಿಮಾನಿಗಳಿಗೆ ಸ್ಪರ್ಧಾತ್ಮಕ ಟೆನಿಸ್ ಟೂರ್ನಿಯೊಂದರಲ್ಲಿ 14 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಆಟವನ್ನು ನೋಡುವ ಭಾಗ್ಯ ಲಭಿಸಿದೆ. ವಿಶ್ವದ ನಂ.4ನೆ ಆಟಗಾರ ನಡಾಲ್ ಸ್ಪೇನ್ ತಂಡ ನಾಲ್ಕು ಬಾರಿ(2004, 2008, 2009,2011) ಡೇವಿಸ್ ಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು.
ಫೆರರ್ 2008, 2009, 2011ರಲ್ಲಿ ಸ್ಪೇನ್ ತಂಡ ಡೇವಿಸ್ ಕಪ್ ಗೆಲ್ಲಲು ನೆರವಾಗಿದ್ದರು. ಸ್ಪೇನ್‌ನ ನಾಲ್ವರು ಆಟಗಾರರಾದ ನಡಾಲ್(16), ಫೆರರ್(18), ಫೆಲಿಸಿಯಾನೊ ಲೊಪೆಝ್(22) ಹಾಗೂ ಮಾರ್ಕ್ ಲೊಪೆಝ್(9)ರಿಗೆ 65 ಡೇವಿಸ್ ಕಪ್ ಪಂದ್ಯಗಳನ್ನು ಆಡಿರುವ ಅನುಭವವಿದೆ.
ಭಾರತದ ಸಿಂಗಲ್ಸ್ ಆಟಗಾರರಿಗೆ ಕೇವಲ ಐದು ಪಂದ್ಯ ಆಡಿದ ಅನುಭವವಿದೆ. ರಾಮ್‌ಕುಮಾರ್ ಕೇವಲ 2 ತಿಂಗಳ ಹಿಂದೆಯಷ್ಟೇ ಚಂಡೀಗಡದಲ್ಲಿ ಕೊರಿಯ ವಿರುದ್ಧ ಚೊಚ್ಚಲ ಡೇವಿಸ್ ಕಪ್ ಆಡಿದ್ದರು. ಪೇಸ್‌ಗೆ 53 ಪಂದ್ಯಗಳನ್ನು ಆಡಿರುವ ಅನುಭವವಿದೆ.
ಪೇಸ್ ಅನನುಭವಿ ಆಟಗಾರರನ್ನು ಮುನ್ನಡೆಸಬೇಕಾಗಿದೆ. ಡೇವಿಸ್ ಕಪ್ ಇತಿಹಾಸದಲ್ಲಿ ಪೇಸ್ ಅತ್ಯಂತ ಯಶಸ್ವಿ ಡಬಲ್ಸ್ ಆಟಗಾರ. ಡಬಲ್ಸ್‌ನಲ್ಲಿ 42 ಪಂದ್ಯಗಳನ್ನು ಜಯಿಸಿರುವ ಪೇಸ್ ಇಟಲಿಯ ನಿಕೊಲಾ ಪಿಟ್ರಂಗೆಲ್ ಸಾಧನೆಯನ್ನು ಸರಿಗಟ್ಟಿದ್ದಾರೆ.
ರೋಹನ್ ಬೋಪಣ್ಣ ಕೊನೆಯ ಕ್ಷಣದಲ್ಲಿ ಗಾಯದ ಸಮಸ್ಯೆಯಿಂದಾಗಿ ಡೇವಿಸ್ ಕಪ್‌ನಿಂದ ಹೊರಗುಳಿದಿದ್ದು, ಪೇಸ್ ಅವರು ಡಬಲ್ಸ್‌ನಲ್ಲಿ ಮೈನೇನಿ ಅವರೊಂದಿಗೆ ಆಡುವ ಸಾಧ್ಯತೆಯಿದೆ. ಇತ್ತೀಚೆಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಪೇಸ್ ಹಾಗೂ ಬೋಪಣ್ಣ ಡಬಲ್ಸ್ ಪಂದ್ಯದಲ್ಲಿ ಆಡಿದ್ದರು. ಆದರೆ, ಒಲಿಂಪಿಕ್ಸ್‌ನ ವೇಳೆಯೇ ಈ ಇಬ್ಬರ ನಡುವೆ ಮನಸ್ತಾಪ ಭುಗಿಲೆದ್ದ ಕಾರಣ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದರು.
ಇತ್ತೀಚೆಗೆ ಯುಎಸ್ ಓಪನ್‌ನಲ್ಲಿ ಮುಖ್ಯ ಸುತ್ತಿಗೆ ತೇರ್ಗಡೆಯಾಗಿದ್ದ ಮೈನೇನಿ ಮೊದಲ ಸುತ್ತಿನಲ್ಲಿ ಜಿರಿ ವೆಸ್ಲೇ ವಿರುದ್ಧ ಜಯ ಸಾಧಿಸಿದ್ದರು. ಶುಕ್ರವಾರದ ಸ್ಪರ್ಧೆಯ ಬಳಿಕ ಮೈನೇನಿ ಡಬಲ್ಸ್ ಪಂದ್ಯ ಆಡುವ ಬಗ್ಗೆ ನಿರ್ಧಾರವಾಗಲಿದೆ.
ಭಾರತ ಹಾಗೂ ಸ್ಪೇನ್ ತಂಡ 1965ರಲ್ಲಿ ಡೇವಿಸ್ ಕಪ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಸ್ಪೇನ್ ಆತಿಥ್ಯದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಭಾರತ 2-3 ಅಂತರದಿಂದ ಸೋತಿತ್ತು. ಸ್ಪೇನ್ ತಂಡ ಭಾರತ ವಿರುದ್ಧ 2-1 ಗೆಲುವು-ಸೋಲಿನ ದಾಖಲೆ ಹೊಂದಿದೆ. 1927ರಲ್ಲಿ ಭಾರತ ತಂಡ ಸ್ಪೇನ್‌ನ್ನು 3-2 ಅಂತರದಿಂದ ಮಣಿಸಲು ಸಫಲವಾಗಿತ್ತು.
1922ರಲ್ಲಿ ತಟಸ್ಥ ತಾಣ ಗ್ರೇಟ್‌ಬ್ರಿಟನ್‌ನಲ್ಲಿ ಉಭಯ ತಂಡಗಳು ಮೊದಲ ಬಾರಿ ಡೇವಿಸ್ ಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ವರ್ಲ್ಡ್ ಗ್ರೂಪ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಭಾರತ ತಂಡವನ್ನು 4-1 ಅಂತರದಿಂದ ಸೋಲಿಸಿತ್ತು.
ಸಂಜೆಗೆ ಪಂದ್ಯ ಆರಂಭವಾಗುತ್ತಿರುವ ಬಗ್ಗೆ ಚರ್ಚೆಗಳು ನಡೆದಿದ್ದು, ಭಾರತ ತಂಡದಲ್ಲಿ ಪಂದ್ಯದ ಸಮಯದ ಬಗ್ಗೆ ಭಿನ್ನಾಭಿಪ್ರಾಯ ಮೂಡಿದೆ.
ರಾಮ್‌ಕುಮಾರ್‌ಗೆ ನಡಾಲ್ ಮೊದಲ ಎದುರಾಳಿ
ಹೊಸದಿಲ್ಲಿ, ಸೆ.15: ಭಾರತದ ರಾಮ್‌ಕುಮಾರ್ ರಾಮನಾಥನ್ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಡೇವಿಸ್‌ಕಪ್‌ನ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ನಲ್ಲಿ ಸ್ಪೇನ್ ವಿರುದ್ಧದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್‌ರನ್ನು ಎದುರಿಸಲಿದ್ದಾರೆ.
ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ಶುಕ್ರವಾರ ಡ್ರಾ ಪ್ರಕ್ರಿಯೆ ನಡೆಸಿದ್ದು, ಎರಡನೆ ಸಿಂಗಲ್ಸ್ ಪಂದ್ಯ ಸಾಕೇತ್ ಮೈನೇನಿ ಹಾಗೂ ಡೇವಿಡ್‌ಫೆರರ್ ನಡುವೆ ನಡೆಯುವುದು. ಎರಡನೆ ದಿನದ ಪಂದ್ಯದಲ್ಲಿ ಹಿರಿಯ ಟೆನಿಸ್‌ಪಟು ಲಿಯಾಂಡರ್ ಪೇಸ್ ಅವರು ಸಾಕೇತ್ ಮೈನೇನಿ ಜೊತೆಗೂಡಿ ಫೆಲಿಸಿಯಾನೊ ಲೊಪೆಝ್ ಹಾಗೂ ಮಾರ್ಕ್ ಲೊಪೆಝ್‌ರನ್ನು ಡಬಲ್ಸ್ ಪಂದ್ಯದಲ್ಲಿ ಎದುರಿಸಲಿದ್ದಾರೆ.
ರಿವರ್ಸ್ ಸಿಂಗಲ್ಸ್‌ನಲ್ಲಿ ಸಾಕೇತ್ ಅವರು ನಡಾಲ್ ವಿರುದ್ಧ ರಾಮನಾಥನ್ ಅವರು ಫೆರರ್ ವಿರುದ್ಧ ಆಡಲಿದ್ದಾರೆ.







