ಭಾರತ-ನ್ಯೂಝಿಲೆಂಡ್ ಟೆಸ್ಟ್ ಸರಣಿ; ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕ: ಗಂಭೀರ್

ಹೊಸದಿಲ್ಲಿ, ಸೆ.15: ಮುಂಬರುವ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ನಿರ್ಲಕ್ಷಿಸಲ್ಪಟ್ಟಿರುವ ಭಾರತದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಝಿಲೆಂಡ್ ತಂಡವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ ಗಂಭೀರ್,‘‘ಭಾರತ ಹಾಗೂ ನ್ಯೂಝಿಲೆಂಡ್ ಉತ್ತಮ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದ್ದಾರೆ. ಸರಣಿಯಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ ಎಂದು ಸುದ್ದಿಗಾರರಿಗೆ ಗಂಭೀರ್ ತಿಳಿಸಿದ್ದಾರೆ.
ನ್ಯೂಝಿಲೆಂಡ್ ತಂಡ ಬಲಿಷ್ಠವಾಗಿದೆ. ಅವರು ಮೂವರು ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ ಹಾಗೂ ಮಾರ್ಕ್ ಕ್ರೆಗ್‌ರನ್ನು ಆಡಿಸುವ ಸಾಧ್ಯತೆಯಿದೆ. ಯಾವುದೇ ತಂಡವಾಗಿರಲಿ ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಿದರೆ, ಆ ತಂಡ ಗೆಲ್ಲುವುದು ನಿಶ್ಚಿತ ಎಂದು ಇಂಡಿಯನ್ ಜೂನಿಯರ್ ಪ್ಲೇಯರ್ಸ್ ಲೀಗ್(ಐಜೆಪಿಎಲ್)ನ ಪ್ರತಿಭಾನ್ವೇಷಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಗಂಭೀರ್ ಹೇಳಿದ್ದಾರೆ. ಗಂಭೀರ್ ಬುಧವಾರ ಕೊನೆಗೊಂಡ ದುಲೀಪ್ ಟ್ರೋಫೀಯಲ್ಲಿ 320 ರನ್ ಗಳಿಸಿದ್ದರು.
ಗಂಭೀರ್ ನೇತೃತ್ವದ ಇಂಡಿಯಾ ಬ್ಲೂ ತಂಡ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ದುಲೀಪ್ ಟ್ರೋಫಿಯಲ್ಲಿ ಗಂಭೀರ್ ಉತ್ತಮ ಪ್ರದರ್ಶನ ನೀಡಿರುವ ಹೊರತಾಗಿಯೂ ನ್ಯೂಝಿಲೆಂಡ್ ವಿರುದ್ಧ ಸರಣಿಗೆ 15 ಸದಸ್ಯರ ತಂಡದ ಆಯ್ಕೆಯ ವೇಳೆ ಆಯ್ಕೆಗಾರರು ಗಂಭೀರ್‌ರನ್ನು ನಿರ್ಲಕ್ಷಿಸಿದ್ದರು.
ಕಿವೀಸ್ ವಿರುದ್ಧ ಸರಣಿಗೆ ಆಯ್ಕೆಯಾಗದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಗಂಭೀರ್,‘‘ ನಿಜ ಹೇಳಬೇಕೆಂದರೆ, ನಾನು ಭಾರತ ತಂಡಕ್ಕೆ ಆಯ್ಕೆಯಾಗಬೇಕೆಂಬ ಉದ್ದೇಶದಿಂದ ಆಡುವುದಿಲ್ಲ. ರನ್ ಗಳಿಸುವುದು ನನ್ನ ಕೆಲಸ. ನಾನು ಆ ನಿಟ್ಟಿನಲ್ಲಿ ಹೆಚ್ಚು ಗಮನಹರಿಸುವೆ. ಆಯ್ಕೆ ಮಾಡುವುದು ಆಯ್ಕೆಗಾರರಿಗೆ ಬಿಟ್ಟ ವಿಚಾರ. ತಂಡದ ಗೆಲುವಿಗೆ ನೆರವಾಗುವುದು ನನ್ನ ಕೆಲಸವಾಗಿದೆ’’ ಎಂದು ಹೇಳಿದ್ದಾರೆ.







