ಇಂದು ತಮಿಳುನಾಡು ಬಂದ್‘ ಕನ್ನಡಿಗರಿಗೆ ಸೂಕ್ತಭದ್ರತೆ ಕಲ್ಪಿಸಿ’:
ಜಯಲಲಿತಾಗೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಸೆ.15: ‘ತಮಿಳುನಾಡಿನಲ್ಲಿ ವಾಸವಾಗಿರುವ ಕನ್ನಡಿಗರಿಗೆ ವಿಶೇಷ ಭದ್ರತೆ ಕಲ್ಪಿಸಬೇಕು. ಅಲ್ಲಿರುವ ಕನ್ನಡಿಗರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಜಯ ಲಲಿತಾ ಅವರಿಗೆ ಪತ್ರ ಬರೆದಿದ್ದಾರೆ.
ತಮಿಳುನಾಡಿನ ಕೆಲ ಸಂಘಟನೆಗಳು ‘ಬಂದ್’ಗೆ ಕರೆ ನೀಡಿದ್ದು, ಅಲ್ಲಿನ ಕನ್ನಡಿಗರಿಗೆ ವಿಶೇಷ ಭದ್ರತೆ ಕಲ್ಪಿಸಬೇಕು. ಅವರ ಆಸ್ತಿ-ಪಾಸ್ತಿಗೆ ಯಾವುದೇ ರೀತಿ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಅಲ್ಲಿನ ಕನ್ನಡಿಗರಿಗೆ ಏನಾದರೂ ಆದರೆ, ಅದರ ಪರಿಣಾಮ ಕರ್ನಾಟಕ ರಾಜ್ಯದ ಮೇಲಾಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಸೆ.12ರಂದು ಕರ್ನಾಟಕದಲ್ಲಿ ನಡೆದ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ರಾಜ್ಯದಲ್ಲಿನ ತಮಿಳು ಭಾಷಿಕರ ರಕ್ಷಣೆಗೆ ಮತ್ತು ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಾವೇರಿ ನದಿ ನೀರಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಮಾಧ್ಯಮಗಳಿಗೆ ಈಗಾಗಲೇ ಜವಾಬ್ದಾರಿಯಿಂದ ಸುದ್ದಿಗಳನ್ನು ಬಿತ್ತರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅದೇ ರೀತಿಯಲ್ಲಿ ನೀವು ನಿಮ್ಮ ರಾಜ್ಯದ ಮಾಧ್ಯಮಗಳಿಗೆ ಸೂಚನೆ ನೀಡಬೇಕೆಂದು ಅವರು ಹೇಳಿದ್ದಾರೆ.
ರಾಜ್ಯದ ಪೊಲೀಸರು ಹಾಗೂ ಅಧಿಕಾರಿಗಳು ನಿಮ್ಮ ಸಂಪರ್ಕದಲ್ಲಿದ್ದು, ಶಾಂತಿ -ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಮ್ಮಿಂದಲೂ ಸಹಕಾರ ನಿರೀಕ್ಷಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿನ ಸಿಎಂಗೆ ಬರೆದಿರುವುದು ಪತ್ರದಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.







