ಕೆಪಿಎನ್ ಬಸ್ಸುಗಳಿಗೆ ಬೆಂಕಿಯಿಟ್ಟ ಪ್ರಕರಣ
7 ಮಂದಿ ಬಂಧನ
ಬೆಂಗಳೂರು, ಸೆ.15: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಗರದಲ್ಲಿ ತೀವ್ರಗೊಂಡಿದ್ದ ಹಿಂಸಾತ್ಮಕ ಪ್ರತಿಭಟನೆಯನ್ನೆ ಗುರಿಯಾಗಿಸಿಕೊಂಡು ಕೆಪಿಎನ್ ಟ್ರಾವೆಲ್ಸ್ ಬಸ್ಸುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಏಳು ಜನರನ್ನು ಬಂಧಿಸುವಲ್ಲಿ ರಾಜರಾಜೇಶ್ವರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ರಕ್ಷಿತ್ (18), ಸತೀಶ್ (27), ಕೆಂಪೇಗೌಡ (28), ಪ್ರಕಾಶ್ (46), ಲೋಕೇಶ್ (25), ಚಂದನ್ ಎಂದು ಗುರುತಿಸಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಸೆರೆ ಹಿಡಿದಿದ್ದು, ಬಂಧಿತರು ಇಲ್ಲಿನ ಡಿಸೋಜಾ ನಗರ, ವೀರಭದ್ರ ನಗರ ನಿವಾಸಿಗಳಾಗಿದ್ದಾರೆ. ಇವರೆಲ್ಲರು ಪೀಣ್ಯ ವ್ಯಾಪ್ತಿಯ ಗಾರ್ಮೆಂಟ್ಸ್‌ನಲ್ಲಿಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಪ್ರಕರಣ ಹಿನ್ನೆಲೆ: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಸೆ.12 ಸೋಮವಾರದಂತೆ ಏಕಾಏಕಿ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು. ಇದನ್ನೆ ಗುರಿಯಾಗಿಸಿಕೊಂಡು ಆರೋಪಿಗಳು, ಬೆಂಗಳೂರು-ಮೈಸೂರು ರಸ್ತೆಯಲ್ಲಿದ್ದ ಕೆಪಿಎನ್ ಬಸ್ ಘಟಕಕ್ಕೆ ನುಗ್ಗಿ ಸುಮಾರು 35ಕ್ಕೂ ಹೆಚ್ಚು ಬಸ್‌ಗಳಿಗೆ ಬೆಂಕಿಹಚ್ಚಿದ್ದರು. ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ಸಂಬಂಧ ಇಲ್ಲಿನ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಕಾನೂನು ಬಾಹಿರವಾಗಿ ಗುಂಪುಗೂಡುವುದು (ಐಪಿಸಿ 143), ದೊಂಬಿ (147), ಮಾರಕಾಸ್ತ್ರ ಹಿಡಿದು ದೊಂಬಿ (148), ಮಾರಕಾಸ್ತ್ರಗಳಿಂದ ಹಲ್ಲೆ (324), ಸಾರ್ವಜನಿಕ ಆಸ್ತಿಗೆ ಹಾನಿ (427) ಹಾಗೂ ಬೆಂಕಿ ಹಚ್ಚಿ ಹಾನಿ ಮಾಡಿದ (435) ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ, ತನಿಖೆ ಮುಂದುವರಿಸಲಾಗಿದೆ.





