ಕಾವೇರಿ ಹೋರಾಟದ ಹೆಸರಲ್ಲಿ ದರೋಡೆ
ಬೆಂಗಳೂರು, ಸೆ. 15: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿರೋಧಿಸಿ ಏಕಾಏಕಿ ಸೆ.12ರಂದು ನಗರದಲ್ಲಿ ನಡೆದ ತೀವ್ರ ಹಿಂಸಾತ್ಮಕ ಹೋರಾಟವನ್ನೆ ಗುರಿಯಾಗಿಸಿಕೊಂಡು ಒಂದು ಎಲೆಕ್ಟ್ರಾನಿಕ್ ಅಂಗಡಿಗೆ ನುಗ್ಗಿ ಸುಮಾರು 70 ಲಕ್ಷ ರೂ. ವೌಲ್ಯದ ವಸ್ತುಗಳನ್ನು ದರೋಡೆ ಮಾಡಿರುವ ಆರೋಪ ಇಲ್ಲಿನ ಜೆಪಿ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಕನಕಪುರ ಮುಖ್ಯರಸ್ತೆಯ ಚುಂಚಘಟ್ಟದಲ್ಲಿರುವ ರಮೇಶ್ ಎಲೆಕ್ಟ್ರಾನಿಕ್ಸ್ ಅಂಗಡಿಯ ಮೇಲೆ ಸೆ.12ರಂದು ಕಾವೇರಿ ಹೋರಾಟದ ನೆಪದಲ್ಲಿ ನೂರಕ್ಕೂ ಹೆಚ್ಚಿರುವ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ಅಂಗಡಿ ಬಾಗಿಲು ಮುರಿದು, ಅಂಗಡಿಯೊಳಗಿದ್ದ, ಸುಮಾರು 70 ಲಕ್ಷ ರೂ. ವೌಲ್ಯದ ಬೆಲೆಬಾಳುವ ಇಲೆಕ್ಟ್ರಾನಿಕ್ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಈ ಸಂಬಂಧ ಅಂಗಡಿ ಮಾಲಕ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಬಗ್ಗೆ ಮಾತನಾಡಿದ ಅಂಗಡಿ ಮಾಲಕ ರಮೇಶ್, ಸೆ.12ರಂದು ಏಕಾಏಕಿ ಪ್ರತಿಭಟನೆ ನಡೆಯುತ್ತಿದೆ ಎಂದು ಆತಂಕಗೊಂಡು ಅಂಗಡಿ ಬಾಗಿಲು ಹಾಕಿ, ಮನೆ ಸೇರಿಕೊಂಡೆ. ಆದರೆ, ಇದನ್ನೆ ಗುರಿ ಮಾಡಿಕೊಂಡು ಮುಂದಿನ ರಸ್ತೆಯಲ್ಲಿರುವ ಮತ್ತೊಂದು ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲಕ ನಾಣೇಶ್ ಎಂಬಾತ, ಕಾವೇರಿ ಹೋರಾಟ ನೆಪದಲ್ಲಿ ಸುಮಾರು ನೂರು ಮಂದಿಯನ್ನು ಕರೆತಂದು ದರೋಡೆ ಮಾಡಿಸಿದ್ದಾನೆ ಎಂದು ಆರೋಪಿಸಿದರು.
ನಾಣೇಶ್ ಹತ್ತು ವರ್ಷಗಳಿಂದ ನನ್ನ ಬಳಿಯೇ ಕೆಲಸ ಮಾಡುತ್ತಿದ್ದ, ಕೆಲ ತಿಂಗಳ ಹಿಂದೆ, ಆತನ ವರ್ತನೆ ಸರಿಯಿಲ್ಲದ ಕಾರಣ ಕೆಲಸಕ್ಕೆ ಬೇಡ ಎಂದು ನೇರವಾಗಿ ಹೇಳಿ ನಿಲ್ಲಿಸಿದೆ. ಆದರೆ, ಆತ ನನ್ನ ಮೇಲೆ ದ್ವೇಷ ಕಟ್ಟಿಕೊಂಡು ಮುಂದಿನ ರಸ್ತೆ ಬದಿಯಲ್ಲಿಯೇ ಅಂಗಡಿಯೊಂದನ್ನು ಆರಂಭಿಸಿದ. ಅಲ್ಲದೆ, ಈ ದರೋಡೆಗೆ ನಾಣೇಶ್ ನೇರ ಕಾರಣ ಎಂದು ಆಪಾದಿಸಿದರು.
ಪ್ರಕರಣ ಸಂಬಂಧ ಜೆಪಿ ನಗರ ಠಾಣಾ ಪೊಲೀಸರು ನಾಣೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ.







