ಡಿಸಿ ಮನ್ನಾ ಭೂಮಿ ಅತಿಕ್ರಮಣ ತೆರವಿಗೆ ಆಗ್ರಹ: ಕಂದಾಯ ಸಚಿವರಿಗೆ ಮನವಿ
ಉಡುಪಿ, ಸೆ.15: ಉಡುಪಿ ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಿ ಅರ್ಹ ದಲಿತರಿಗೆ ತಲಾ ಐದು ಎಕರೆ ಜಾಗ ಮಂಜೂರು ಮಾಡಬೇಕೆಂದು ದಸಂಸ (ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿ ಗುರುವಾರ ಸಚಿವ ಕಾಗೋಡು ತಿಮ್ಮಪ್ಪರಿಗೆ ಮನವಿ ಸಲ್ಲಿಸಿತು.
ಜಿಲ್ಲೆಯ ಎಲ್ಲ ಗ್ರಾಪಂ, ಪಪಂ, ನಗರಸಭೆ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒಂದು ಎಕರೆ ಭೂಮಿ ಮಂಜೂರು ಮಾಡಬೇಕು. 94ಸಿ ಮತ್ತು 94ಸಿಸಿ ಅರ್ಜಿದಾರರಿಗೆ ಶೀಘ್ರ ನಿವೇಶನ ನೀಡಿ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣ ಬಜೆ ಉಪಸ್ಥಿತರಿದ್ದರು.
ಮಲೆಕುಡಿಯರ ಸಂಘ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಬುಡಕಟ್ಟು ಸಮುದಾಯದವರು ಯಾವುದೇ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದರೂ ಮೂಲ ಸೌಕರ್ಯ ಒದಗಿಸಲು ಅವಕಾಶ ಇದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ತಡೆಯೊಡ್ಡುತ್ತಿದ್ದಾರೆ. ಆದುದರಿಂದ ಅರಣ್ಯ ವಾಸಿ ಮಲೆಕುಡಿಯ ಮತ್ತು ಇತರ ಬುಡಕಟ್ಟು ಸಮುದಾಯದವರಿಗೆ ಮೂಲಭೂತ ಸೌಕರ್ಯ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಸಚಿವ ಕಾಗೋಡು ತಿಮ್ಮಪ್ಪರಿಗೆ ಮನವಿ ಸಲ್ಲಿಸಿತು.
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕದಲ್ಲಿ ನಿರ್ಮಾಣ ಮಾಡುತ್ತಿರುವ ಸಮುದಾಯ ಭವನದ ಜಾಗವನ್ನು ಸಂಘದ ಹೆಸರಿಗೆ ಮಂಜೂರು ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸುಧಾಕರ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಸಮತಾ ಸೈನಿಕ ದಳ: ಚೇರ್ಕಾಡಿ ಗ್ರಾಪಂ ವ್ಯಾಪ್ತಿಯ ಸುಮಾರು 400 ದಲಿತ ಹಾಗೂ ಹಿಂದುಳಿದ ವರ್ಗಗಳ ನಿವೇಶನ ರಹಿತ ಕುಟುಂಬಗಳಿಗೆ 94ಸಿ ಕಾಯ್ದೆಯಡಿ ಹಕ್ಕುಪತ್ರ ನೀಡುವಂತೆ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿಯು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಈ ಕುಟುಂಬಗಳು ಕಳೆದ 40 ವರ್ಷಗಳಿಂದ ಇಲ್ಲಿ ಮನೆಕಟ್ಟಿವಾಸ್ತವ್ಯ ಮಾಡಿಕೊಂಡಿದ್ದು, 94ಸಿಯಲ್ಲಿ ಸಲ್ಲಿಸಿದ ಅರ್ಜಿಯನ್ನುತಿರಸ್ಕರಿಸಿರುವ ಅಧಿಕಾರಿಗಳು 94ಸಿಸಿಯಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ. ಆದುದರಿಂದ 94ಸಿಯಲ್ಲಿ ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿಯಂತೆ ಹಕ್ಕುಪತ್ರ ನೀಡಲು ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಮನವಿಯಲ್ಲಿ ಒತ್ತಾಯಿಸಿದರು.





