ಗೋಮಾಂಸ ವದಂತಿ: ಜಮ್ಮು-ಕಾಶ್ಮೀರದಲ್ಲಿ ಘರ್ಷಣೆ
ರಾಜೌರಿ, ಸೆ.15: ಗೋಮಾಂಸ ಸಂಬಂಧಿ ವದಂತಿಗಳಿಂದಾಗಿ ಬುಧವಾರ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದ ಬಳಿಕ ಕರ್ಫ್ಯೂವನ್ನು ಹೇರಲಾಗಿದೆ.
ಈದ್ ದಿನದಂದು ಒಂಟೆಯೊಂದನ್ನು ಬಲಿ ನೀಡಲಾಗಿದ್ದು, ಮಾಂಸವನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವ ನನ್ನು ಗುಂಪೊಂದು ಗೋಮಾಂಸದ ಶಂಕೆಯಲ್ಲಿ ಥಳಿಸಿದ್ದು ಘರ್ಷಣೆಗೆ ನಾಂದಿ ಹಾಡಿತ್ತು. ಸುದ್ದಿ ಹರಡುತ್ತಿದ್ದಂತೆ ಉಭಯ ಸಮುದಾಯಗಳ ಜನರು ಘರ್ಷಣೆಗಿಳಿದಿದ್ದು ಹಲವರು ಗಾಯಗೊಂಡಿದ್ದಾರೆ.
ಆಡಳಿತವು ಕರ್ಫ್ಯೂ ಹೇರಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರೂ ಪಟ್ಟಣದ ಹಲವು ಪ್ರದೇಶಗಳಲ್ಲಿ ಘರ್ಷಣೆಗಳು ಮುಂದುವರಿದಿದ್ದವು. ಕಲ್ಲು ತೂರಾಟದಲ್ಲಿ ನಿರತರಾದವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಕಲ್ಲು ತೂರಾಟದಿಂದ ಪತ್ರಿಕಾ ಛಾಯಾಚಿತ್ರಗ್ರಾಹಕ ನೋರ್ವ ಗಾಯಗೊಂಡಿದ್ದು, ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ.
ಕೋಮು ವದಂತಿಗಳನ್ನು ಹರಡುವವರನ್ನು ನಾವು ಬಿಡುವುದಿಲ್ಲ. ಅದು ಗೋಮಾಂಸವಾಗಿರಲಿಲ್ಲ. ಒಂಟೆಯ ಮಾಂಸವನ್ನು ಒಯ್ಯುತ್ತಿದ್ದ ವ್ಯಕ್ತಿಯನ್ನು ಥಳಿಸಿದವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.





