ನಕಲಿ ಪದವಿ ಪತ್ರ ಪ್ರಕರಣ: ಸ್ಮತಿ ಇರಾನಿಗೆ ಸಮನ್ಸ್?
ಹೊಸದಿಲ್ಲಿ, ಸೆ.15: ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ನೀಡುವ ಅಫಿ ದಾವಿತ್‌ನಲ್ಲಿ ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿಯವರಿಗೆ ಸಮನ್ಸ್ ನೀಡುವ ಕುರಿತು ದಿಲ್ಲಿಯ ಕೋರ್ಟ್ ಮುಂದಿನ ತಿಂಗಳು ತೀರ್ಮಾನಿಸಲಿದೆ. ಈ ಪ್ರಕರಣದ ಕುರಿತು ಆದೇಶ ನೀಡಬೇಕಿದ್ದ ಮೆಟ್ರೋಪಾಲಿಟನ್ ನ್ಯಾಯಾಧೀಶ ಹರ್ವೀಂದರ್ ಸಿಂಗ್ ಅವರು, ಆದೇಶ ಇನ್ನೂ ಸಿದ್ಧವಾಗಿಲ್ಲ ಎಂಬ ಕಾರಣ ನೀಡಿ ಅಕ್ಟೋಬರ್ 1ರಂದು ಆದೇಶ ನೀಡುವುದಾಗಿ ತಿಳಿಸಿದ್ದಾರೆ. ಹವ್ಯಾಸಿ ಪತ್ರಕರ್ತ ಅಹ್ಮರ್ ಖಾನ್ ನೀಡಿದ ದೂರಿನ ಮೇಲೆ ದಾಖಲಾದ ಪ್ರಕರಣದ ವಾದ ವಿವಾದವನ್ನು ಸೆ.3ರಂದು ಆಲಿಸಿದ ಕೋರ್ಟ್, ಚುನಾವಣಾ ಆಯೋಗ ನೀಡಿದ ವರದಿ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯ ಇರಾನಿಯವರ ಶೈಕ್ಷಣಿಕ ಅರ್ಹತೆಯ ಕುರಿತು ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ ಅಧಿಕಾರಿಯೋರ್ವರು ಈ ಮುನ್ನ ಕೋರ್ಟ್‌ನಲ್ಲಿ ಹೇಳಿಕೆ ನೀಡಿ, ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆ ಇರಾನಿಯವರು ಆಯೋಗಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಹುಡುಕಲು ಸಾಧ್ಯವಾಗದು. ಆದರೆ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಗಳಿವೆ ಎಂದಿದ್ದರು. ಇರಾನಿಯವರು 2004ರ ಲೋಕಸಭಾ ಚುನಾವಣೆ ಸಂದರ್ಭ ತಮ್ಮ ನಾಮಪತ್ರದಲ್ಲಿ ಉಲ್ಲೇಖಿಸಿದ್ದ ಬಿಎ ಪದವಿ ಕುರಿತಾದ ದಾಖಲೆಗಳನ್ನು ದಿಲ್ಲಿ ವಿಶ್ವವಿದ್ಯಾನಿಲಯ ಕೂಡಾ ಕೋರ್ಟ್‌ಗೆ ಸಲ್ಲಿಸಿತ್ತು. ಇರಾನಿಯವರ ಶೈಕ್ಷಣಿಕ ಅರ್ಹತೆ ಬಗ್ಗೆ ದಾಖಲೆಗಳನ್ನು ಒದಗಿಸಲು ತನ್ನಿಂದ ಅಸಾಧ್ಯ ವಾಗಿರುವ ಕಾರಣ ಈ ಬಗ್ಗೆ ಚುನಾವಣಾ ಆಯೋ ಗದ ಅಧಿಕಾರಿಗಳಿಗೆ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಬೇಕೆಂದು ದೂರುದಾರರು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಇರಾನಿಯವರು 2004, 2011 ಮತ್ತು 2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ವ್ಯತ್ಯಾಸಗಳಿರುವುದಾಗಿ ಮತ್ತು ಈ ಕುರಿತು ಕೇಳಲಾದ ವಿವರಗಳಿಗೆ ಇರಾನಿಯವರು ಸಮರ್ಪಕ ಉತ್ತರ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದರು. ಇರಾನಿಯವರು ಗೊತ್ತಿದ್ದೂ ಈ ರೀತಿ ಮಾಡಿರುವುದರಿಂದ ಅವರಿಗೆ ಆರ್‌ಪಿಎ ಕಾಯ್ದೆಯ ಐಪಿಸಿ ಸೆಕ್ಷನ್ 125 ಎ ಅಡಿ ಶಿಕ್ಷೆ ವಿಧಿಸಬೇಕೆಂದು ದೂರುದಾರರು ಕೋರಿದ್ದರು.
ಸುಳ್ಳು ಪ್ರಮಾಣ ಪತ್ರ ನೀಡಿದವರಿಗೆ ಸೆಕ್ಷನ್ 125ಎ ಅಡಿ ಆರು ತಿಂಗಳ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.





