ಕೇರಳ: ಸೌಮ್ಯಾ ಅತ್ಯಾಚಾರಿಯ ಮರಣ ದಂಡನೆ ಶಿಕ್ಷೆ 7 ವರ್ಷಗಳಿಗೆ ಇಳಿಕೆ
ಹೊಸದಿಲ್ಲಿ, ಸೆ.15: ಕೇರಳದಲ್ಲಿ 2011ರಲ್ಲಿ 23ರ ಹರೆಯದ ಸೌಮ್ಯಾ ಎಂಬಾಕೆಯನ್ನು ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ದೂಡಿ, ತಾನೂ ಹೊರಗೆ ಹಾರಿ, ಯುವತಿಗೆ ಕಲ್ಲಿನಿಂದ ಗುದ್ದಿ ನೋವಿನ ಸ್ಥಿತಿಯಲ್ಲೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದನು.
ಅತ್ಯಾಚಾರಿ ಗೋವಿಂದಚಾಮಿ ಎಂಬಾತನಿಗೆ ತ್ವರಿತ ನ್ಯಾಯಾಲಯವೊಂದು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಇಂದು ಸುಪ್ರೀಂಕೋರ್ಟ್ ಕಡಿತಗೊಳಿಸಿ 7 ವರ್ಷಗಳ ಕಾರಾಗೃಹ ವಾಸವನ್ನು ವಿಧಿಸಿದೆ.
ತ್ವರಿತನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಯನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ಸುಪ್ರೀಂಕೋರ್ಟ್ ಇಂದು, ಅತ್ಯಾಚಾರ ನಡೆದಿರುವುದಕ್ಕೆ ಸಾಕ್ಷವಿದೆಯಾದರೂ, ಕೊಲೆ ನಡೆಸಿರುವುದಕ್ಕೆ ಸಾಕಷ್ಟು ಸಾಕ್ಷವಿಲ್ಲವೆಂದು ಹೇಳಿದೆ.
ಎರ್ನಾಕುಲಂನ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯಾ, 2011ರ ಫೆಬ್ರವರಿಯಲ್ಲಿ ಸುಮಾರು 100 ಕಿ.ಮೀ. ದೂರದ ಶೋರ್ನೂರಿನ ತನ್ನ ಮನೆಗೆ ಮರಳುತ್ತಿದ್ದಾಗ, ಮಹಿಳಾ ಬೋಗಿಯಲ್ಲಿ ಆಕೆಯ ಮೇಲೆ ದಾಳಿ ನಡೆದಿತ್ತು. ತಮಿಳುನಾಡಿನ ಸರಣಿ ಅಪರಾಧಿ ಗೋವಿಂದಚಾಮಿ ಎಂಬಾತ ಸೌಮ್ಯಾಳ ಮೇಲೆ ದಾಳಿ ನಡೆಸಿ, ದರೋಡೆಗೆ ಪ್ರಯತ್ನಿಸಿದ್ದನು.
ಸೌಮ್ಯಾ ತಿರುಗಿ ಬಿದ್ದಾಗ ಆಕೆಯನ್ನು ಗೋವಿಂದಚಾಮಿ ರೈಲಿನಿಂದ ಹೊರ ದೂಡಿದ್ದನೆಂದು ಪ್ರಾಸಿಕ್ಯೂಶನ್ ಆರೋಪಿಸಿತ್ತು.
ಹಳಿಗಳ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸೌಮ್ಯಾ, ಆಸ್ಪತ್ರೆಯೊಂದರಲ್ಲಿ 5 ದಿನಗಳ ಬಳಿಕ ಕೊನೆಯುಸಿರೆಳೆದಿದ್ದಳು.
ಆಕೆ ತಾನಾಗಿಯೇ ರೈಲಿನಿಂದ ಹಾರಿದುದಲ್ಲ. ಅವಳನ್ನು ಹೊರ ತಳ್ಳಲಾಗಿತ್ತೆಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷವಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ.





