ಮಾನಸಿಕ ರೋಗ ಗುಣವಾಗಲು ಕುಟುಂಬ, ಸಮಾಜದ ಬೆಂಬಲ ಅಗತ್ಯ: ಡಾ. ರಾಮಕೃಷ್ಣ ರಾವ್

ಮಂಗಳೂರು, ಸೆ.16: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( ಮಾನಸಿಕ ವಿಭಾಗ) ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಸಹಯೋಗದೊಂದಿಗೆ ನಡೆದ "ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ 2016 " ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ನಿರ್ಧಾರ ಕ್ಚಣಿಕವಾದದು. ಈ ಸಂದರ್ಭದಲ್ಲಿ ಆತ್ಮಹತ್ಯೆಗೈಯಲು ನಿರ್ಧರಿಸಿದಂತಹ ವ್ಯಕ್ತಿಗಳಿಗೆ ಸಾಂತ್ವನ, ಆರೈಕೆ, ಬೆಂಬಲ ಅವರಿಗೆ ದೊರೆತರೆ ಅವರು ಆತ್ಮಹತ್ಯೆ ನಿರ್ಧಾರದಿಂದ ಹೊರಬರಬಹುದು ಎಂದರು. ಮಾನಸಿಕ ರೋಗ ಗುಣವಾಗಲು ವೈದ್ಯರ ಚಿಕಿತ್ಸೆಯ ಜೊತೆ ಕುಟುಂಬದ, ಸಮಾಜದ ಬೆಂಬಲ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಉಪ ಪೊಲೀಸ್ ಆಯುಕ್ತ ( ಕಾನುನು ಸುವ್ಯವಸ್ಥೆ) ಡಾ.ಕೆ.ಎನ್ .ಶಾಂತರಾಜು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎ.ಜೆ ಆಸ್ಪತ್ರೆ ಮನೋರೋಗ ವಿಭಾಗ ಮುಖ್ಯಸ್ಥ ಡಾ. ರವೀಶ್ ತುಂಗ ಮಾತನಾಡಿ, ಯೋಚನೆ, ಭಾವನೆ, ವರ್ತನೆ ಸಮತೋಲನದಲ್ಲಿದ್ದರೆ ಮನುಷ್ಯ ನಿಗೆ ಯಾವುದೇ ಸಮಸ್ಯೆ ಯಿರುವುದಿಲ್ಲ. ಯೋಚನೆಗಿಂತ ಭಾವನೆ ಪ್ರಬಲವಾಗುತ್ತ ಹೋದರೆ ಮನಸಿನ ಸಮತೋಲನ ತಪ್ಪುತ್ತದೆ. ಈ ರೀತಿಯಾದಾಗ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಒತ್ತಡ ನಿಭಾಯಿಸಲು ಸಾಧ್ಯವಾದರೆ ಮಾನಸಿಕ ಕಾಯಿಲೆಯ ಜೊತೆಗೆ ದೈಹಿಕ ಕಾಯಿಲೆಯನ್ನೂ ಗುಣಮುಖವಾಗಿಸಲು ಸಾಧ್ಯ ಎಂದರು.
ಆತ್ಮಹತ್ಯೆಗೆ ಒತ್ತಡವೇ ಕಾರಣವಲ್ಲ. ಒತ್ತಡ ಒಂದು ಕಾರಣವಷ್ಟೆ. ಮನುಷ್ಯ ಇತರರಿಗೆ ನೀಡುವ ಸಮಯದಂತೆ ತನಗಾಗಿ 30-40 ನಿಮಿಷ ಮೀಸಲಿಟ್ಟರೆ ಸಮಸ್ಯೆ ಪರಿಹಾರ ಸಾಧ್ಯ ಎಂದು ರವೀಶ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಪ್ರಸಕ್ತ ಒತ್ತಡಕ್ಕೆ ಒಳಗಾಗಿ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡುವಂತಹ ಪರಿಸ್ಥಿತಿಯಿದೆ. 6ನೆ ತರಗತಿ ಕಲಿಯುವ ವಿದ್ಯಾರ್ಥಿ , 72 ವರ್ಷದ ವೃದ್ದರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ನಡೆಯುತ್ತಿದೆ. ಈ ರೀತಿ ಆಗುತ್ತಿರುವುದು ಕಳವಳಕಾರಿ ಎಂದರು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತ ಸಂಜೀವ ಎಂ. ಪಾಟೀಲ್ ಉಪಸ್ಥಿತರಿದ್ದರು.







