ಕ್ರಿಕೆಟಿಗ ಶಾಕಿಬ್ ಅಲ್ ಹಸನ್ ಪ್ರಯಾಣಿಸಿದ್ದ ಹೆಲಿಕಾಪ್ಟರ್ ಪತನ

ಢಾಕಾ, ಸೆ.16: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಕಿಬ್ ಅಲ್ ಹಸನ್ ಹಾಗೂ ಅವರ ಪತ್ನಿ ಉಮ್ಮ್ ಅಹ್ಮದ್ ಶಿಶಿರ್ ಪ್ರಯಾಣಿಸಿದ್ದ ಹೆಲಿಕಾಪ್ಟರ್‌ವೊಂದು ಶುಕ್ರವಾರ ಬೆಳಗ್ಗೆ ಪತನಗೊಂಡಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಹಸನ್ ದಂಪತಿಯನ್ನು ಕಾಕ್ಸ್ ಬಝಾರ್‌ಗೆ ಬಿಟ್ಟು ಢಾಕಾಕ್ಕೆ ವಾಪಸಾಗುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.
ಕಾಕ್ಸ್‌ಬಝಾರ್ ಟೌನ್‌ನಿಂದ 27 ಕಿ.ಮೀ.ದೂರದಲ್ಲಿರುವ ರಾಯಲ್ ತೂಲಿಪ್ ಸೀ ರೆಸಾರ್ಟ್‌ನಲ್ಲಿ ಹಸನ್ ದಂಪತಿಯನ್ನು ಇಳಿಸಿ ವಾಪಸಾಗುತ್ತಿದ್ದ ವೇಳೆ ರೆಸಾರ್ಟ್‌ನಿಂದ 1.5 ಕಿ.ಮೀ.ದೂರದಲ್ಲಿರುವ ಇನಾನಿ ಬೀಚ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಹಸನ್ ದಂಪತಿ ಅಪಾಯದಿಂದ ಪಾರಾಗಿದ್ದಾರೆ. ಹಸನ್ ಹಾಗೂ ಅವರ ಪತ್ನಿ ಜಾಹೀರಾತು ಶೂಟಿಂಗ್‌ವೊಂದರಲ್ಲಿ ಪಾಲ್ಗೊಳ್ಳಲು ಕಾಕ್ಸ್‌ಬಝಾರ್ ಟೌನ್‌ಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
‘‘ನಾನು ಚೆನ್ನಾಗಿದ್ದೇನೆ. ಕಾಪ್ಟರ್ ಪತನಗೊಂಡ ಸುದ್ದಿಯನ್ನು ಕೇಳಿ ಆಘಾತವಾಗಿದೆ. ಆದರೆ, ಕಾಪ್ಟರ್ ಪತನದ ಬಗ್ಗೆ ನಾನೇನು ಹೇಳುವ ಪರಿಸ್ಥಿತಿಯಲ್ಲಿಲ್ಲ. ನಾನು ಆಗ ಶೂಟಿಂಗ್‌ನಲ್ಲಿ ನಿರತನಾಗಿದ್ದೆ’’ ಎಂದು ಶಾಕಿಬ್ ತಿಳಿಸಿದ್ದಾರೆ.





