ಕಾನೂನು ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ವರದಿ: ಸುಭಾಷ್ ಕೌಡಿಚ್ಚಾರ್

ಪುತ್ತೂರು, ಸೆ.16: ಕಾನೂನು ಕಾಲೇಜುಗಳ ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕಾನೂನು ಕಾಲೇಜುಗಳಿಗೆ ತೆರಳಿ ಪರಿವೀಕ್ಷಣೆ ನಡೆಸಿ ವರದಿಯನ್ನು ತಯಾರಿಸಿ ಸರಕಾರಕ್ಕೆ ಮತ್ತು ಕಾನೂನು ವಿಶ್ವವಿದ್ಯಾನಿಲಯಗಳಿಗೆ ಸಮರ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಉಪಾಧ್ಯಕ್ಷ ಸುಭಾಷ್ ಕೌಡಿಚ್ಚಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಮೋಚ್ಚ ನ್ಯಾಯಾಲಯ ಹಾಗೂ ಭಾರತೀಯ ವಕೀಲರ ಪರಿಷತ್‌ನ ನಿರ್ದೇಶನದಂತೆ ರಾಜ್ಯ ವಕೀಲರ ಪರಿಷತ್‌ನ ಸದಸ್ಯರು ರಾಜ್ಯದ ಎಲ್ಲಾ ಕಾನೂನು ಕಾಲೇಜಿಗೆ ಪೂರ್ವಭಾವಿಯಾಗಿ ತಿಳಿಸದೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ಗ್ರಂಥಾಲಯ ವೀಕ್ಷಣೆ, ಅಣಕು ನ್ಯಾಯಾಲಯಗಳ ಕಾರ್ಯ ನಿರ್ವಹಣೆಯನ್ನು ಪರಿವೀಕ್ಷಣೆ ನಡೆಸಿ ಕಾನೂನು ವಿಶ್ವವಿದ್ಯಾನಿಲಯಕ್ಕೆ ವರದಿ ಸಲ್ಲಿಸಿ ಕಾನೂನು ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆ ನಡೆಸಲಾಗುವುದು. ಕಾನೂನು ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆ ನಡೆಸಿ ವೃತ್ತಿನಿರತ ವಕೀಲರ ಸಲಹೆಯ ಆಧಾರದ ಮೇಲೆ ಈ ಮಾರ್ಗೋಪಾಯಗಳನ್ನು ನೀಡಲಿದೆ. ನ್ಯಾಯಾಂಗವನ್ನು ಬಲಪಡಿಸುವ ಕಾರ್ಯದಲ್ಲಿ ಸಾರ್ವಜನಿಕರ ಚಿಂತನೆ ಮತ್ತು ಆಗ್ರಹ ಅಗತ್ಯ ಎಂದರು.
ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ವಕೀಲರ ವೃತ್ತಿಧರ್ಮವಾಗಿದ್ದು, ವೃತ್ತಿ ಪ್ರಮಾಣ ಪತ್ರಗಳನ್ನು ಕೊಡುವ ಮೂಲಕ ಅಕ್ರಮವಾಗಿ ನ್ಯಾಯವಾದಿಗಳೆಂದು ಹೇಳಿಕೊಂಡು ಬೇನಾಮಿ ವ್ಯವಹಾರ ನಡೆಸುತ್ತಿರುವ ನಕಲಿ ವಕೀಲರ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದ ಅವರು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಹತ್ವದ ಹೊಣೆಗಾರಿಕೆ ನ್ಯಾಯಾಂಗದ ಮೇಲಿದೆ. ರಾಜ್ಯದಲ್ಲಿ 95ಸಾವಿರ ವೃತ್ತಿನಿರತ ವಕೀಲರು ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಕಕ್ಷಿದಾರರಿಗೆ ವಾದ ನಿರಾಕರಣೆ ಮಾಡುವುದು ವಕೀಲ ವೃತ್ತಿ ಧರ್ಮದಲ್ಲಿನ ಅನ್ಯಾಯವಾಗಿದೆ ಎಂದರು.
ಪರಿಷತ್ ವತಿಯಿಂದ ರಾಜ್ಯ ವಕೀಲರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗಿದೆ. ವಕೀಲರು ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಾಗ ಸಿಗಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಷತ್ ಸರಕಾರದ ಜೊತೆಗೆ ಸಮಾಲೋಚನೆ ನಡೆಸುತ್ತಿದೆ. ಅಲ್ಲದೆ ಯಾವ ಹಸ್ತಕ್ಷೇಪವೂ ಇಲ್ಲದೆ ಸರ್ವ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಈ ದೇಶದ ಪ್ರಜೆಗಳ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಕೀಲರ ಪರಿಷತ್ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದರು.
ಕಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರ ಪರೀಕ್ಷೆಗೆ ನುರಿತ ಅಭ್ಯರ್ಥಿಗಳಿಗೆ ಪರಿಷತ್ ವತಿಯಿಂದ ವಿವಿಧ ವಿಷಯಗಳ ಕುರಿತು ಕಾನೂನು ತರಬೇತಿ ಹಮ್ಮಿಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ನವನೀತ್ ಹಿಂಗಾಣಿ ಉಪಸ್ಥಿತರಿದ್ದರು







