ನ್ಯಾಯಬೆಲೆ ಅಂಗಡಿಗಳ ಮೂಲಕ ದ್ವಿದಳ ಧಾನ್ಯ ವಿತರಣೆ: ಯು.ಟಿ.ಖಾದರ್

ಮಂಗಳೂರು,ಸೆ.16: ನ್ಯಾಯಬೆಲೆ ಅಂಗಡಿಗಳ ಮೂಲಕ ದ್ವಿದಳ ಧಾನ್ಯ ವಿತರಣೆಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ಒಪ್ಪಿಗೆ ಪಡೆಯಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಜನರು ಬಳಸುವ ಖಾದ್ಯ ತೈಲಗಳಿಗೆ ಸಂಬಂಧಿಸಿದಂತೆ ತೆಂಗಿನಎಣ್ಣೆ , ಸೂರ್ಯಕಾಂತಿ ಎಣ್ಣೆಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ತಾಳೆ ಎಣ್ಣೆ ಮಾತ್ರ ವಿತರಣೆ ಮಾಡಲಾಗುತಿತ್ತು ಎಂದು ಯು.ಟಿ.ಖಾದರ್ ತಿಳಿಸಿದರು.
ಉಜ್ವಲ ಯೋಜನೆ ರಾಜ್ಯಕ್ಕೆ ಬಂದಿಲ್ಲ
ಕೇಂದ್ರ ಸರಕಾರದ ಮೂಲಕ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಉಜ್ವಲ ಯೋಜನೆ ಇನ್ನೂ ರಾಜ್ಯಕ್ಕೆ ಬಂದಿಲ್ಲ. ಕಳೆದ ಮೇ1ಕ್ಕೆ ಈ ಯೋಜನೆಗೆ ಪ್ರಧಾನ ಮಂತ್ರಿ ಚಾಲನೆ ನೀಡಿದರೂ ರಾಜ್ಯಕ್ಕೆ ಇನ್ನೂ ತಲುಪಿಲ್ಲ. ಈ ಯೋಜನೆಗೆ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಪಟ್ಟಿಯನ್ನು ತಯಾರಿಸಲಾಗಿದೆ. ಇದರಿಂದ ರಾಜ್ಯದ ಬಹುತೇಕ ಬಿಪಿಎಲ್ ಪಡಿತರದಾರರು ವಂಚಿತರಾಗಬಹುದು. ಇತ್ತೀಚಿನ ಸಮೀಕ್ಷೆಯನ್ನು ಕೇಂದ್ರ ಸರಕಾರ ಪರಿಗಣಿಸಿ ಹೊಸದಾಗಿ ಸೇರ್ಪಡೆಯಾಗಿರುವ ಬಿಪಿಎಲ್ ಪಡಿತರ ಚೀಟಿದಾರರನ್ನು ಸೇರಿಸಬೇಕು ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರ ಜೊತೆ ಸಮಾಲೋಚನೆ ನಡೆಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಪಾಕೃತಿಕ ವಿಕೋಪ ಯೋಜನೆಯಡಿ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ 9 ಕೋಟಿ ರೂ.ಮಂಜೂರು
ಕೇಂದ್ರ ಸರಕಾರದ ಪ್ರಾಕೃತಿಕ ವಿಕೋಪ ಯೋಜನೆಯಡಿ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ 9ಕೋಟಿ ರೂ. ಮಂಜೂರಾಗಿದೆ. ಈ ಅನುದಾನದಿಂದ ಸೋಮೇಶ್ವರ ದೇವಸ್ಥಾನದಿಂದ ತೊಕ್ಕೊಟ್ಟು ಒಳಪೇಟೆಯವರೆಗೆ ಕಾಂಕ್ರೀಟ್ ರಸ್ತೆ, ಉಳ್ಳಾಲ ಬೀಚ್‌ನಿಂದ ತೊಕ್ಕೊಟ್ಟುವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ತೊಕ್ಕೊಟ್ಟು ಜಂಕ್ಷನ್ ಬಳಿ ನಿರಾಶ್ರೀತರಿಗೆ ಭವನವೊಂದನ್ನು ನಿರ್ಮಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ನಗರ ಸಭೆಯ ಅಧ್ಯಕ್ಷ ಕುಂಞಿ ಮೋನು, ಉಪಾಧ್ಯಕ್ಷೆ ಚಿತ್ರಾ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಯು.ಕೆ.ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್ ಹಾಗೂ ಉಳ್ಳಾಲ ನಗರ ಸಭಾ ಸದಸ್ಯರು ಉಪಸ್ಥಿತರಿದ್ದರು.







