ಪತ್ರಕರ್ತರಿಗೆ ಸಮಾಜದ ಹಿತ ಮುಖ್ಯವಾಗಲಿ: ತೇಜಸ್ವಿನಿ ರಮೇಶ್

ಸುಳ್ಯ, ಸೆ.16: ಸುಳ್ಯದ ಅನಿಕೇತನ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೂತನ ಕಾರ್ಯಾಲಯ ಉದ್ಘಾಟನೆ ಮತ್ತು ರಾಜವಾಣಿ ವೆಬ್‌ಸೈಟ್ ಅನಾವರಣ ಕಾರ್ಯಕ್ರಮ ಸುಳ್ಯ ತಾ.ಪಂ. ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. ನೂತನ ಕಾರ್ಯಾಲಯವನ್ನು ಸಾಹಿತಿ ಸುಬ್ರಾಯ ಚೊಕ್ಕಾಡಿ ಉದ್ಘಾಟಿಸಿದರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತೆ ಹಾಗೂ ಮಾಜಿ ಸಂಸದೆ ಡಾ.ತೇಜಸ್ವಿನಿ ರಮೇಶ್ ಗೌಡ ವೆಬ್‌ಸೈಟ್‌ನ್ನು ಅನಾವರಣಗೊಳಿಸಿದರು.
ಮನಸ್ಸನ್ನು, ಹೃದಯವನ್ನು ಮುಟ್ಟುವಂತೆ, ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಮಾಧ್ಯಮ ಕೆಲಸ ಮಾಡಬೇಕು. ರಾಜಕಾರಣಿಗಳಿಗೆ ಒಂದು ದೃಷ್ಟಿಕೋನ ಇದ್ದರೆ, ಪತ್ರಕರ್ತರಿಗೆ ನೂರು ದೃಷ್ಟಿಕೋನ ಇರುತ್ತದೆ. ಸಮಾಜಕ್ಕೆ ಹಿತವಾಗುವ ದೃಷ್ಠಿಕೋನದಿಂದ ಬರೆಯಬೇಕು. ಸುದ್ದಿಯನ್ನು ಕೇವಲ ಕ್ಯಾಮರಾ ಕಣ್ಣಿನಿಂದ ಮಾತ್ರ ನೀಡುವದಲ್ಲ, ಒಳಗಿನ ದೃಷ್ಟಿಯಿಂದ ನೀಡಬೇಕು ಎಂದವರು ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್, ಸುಳ್ಯ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸೀತಾರಾಮ ರೈ ಸವಣೂರು, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ, ಗ್ರೀನ್‌ವ್ ವಿದ್ಯಾ ಸಂಸ್ಥೆಯ ಸಂಚಾಲಕ ಶರೀಫ್ ಬಿ.ಎಸ್., ಹಿರಿಯ ಸಾಹಿತಿ ಜಿ.ಎಸ್. ಉಬರಡ್ಕ, ಕೆವಿಜಿ ಆರ್ಯುವೇದ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಲೀಲಾಧರ್ ಡಿ.ವಿ., ಸಾಹಿತಿ ಎಂ.ಮೀನಾಕ್ಷಿ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಜಾತ್ಯಾತೀತ ಜನತಾದಳ ಅಧ್ಯಕ್ಷ ಕೆ.ದಯಾಕರ ಆಳ್ವ, ಸಿಪಿಎಂ ಮುಖಂಡ ಕೆ.ಪಿ.ರಾಬರ್ಟ್ ಡಿಸೋಜ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕೊರಪ್ಪೊಳು, ಪ್ರಧಾನ ಸಂಪಾದಕ ಬಿ.ಟಿ.ರಂಜನ್ ಮೊದಲಾದವರು ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತನಾಡಿದರು. ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿ, ನಮಿತಾ ಚಾರ್ಮತ ವಂದಿಸಿದರು. ಜನಾರ್ಧನ ಕಣಕ್ಕೂರು ಕಾರ್ಯಕ್ರಮ ನಿರೂಪಿಸಿದರು.







