ಸಮಾಜ ಸುಧಾರಕರ ತತ್ವ ಚಿಂತನೆಗಳನ್ನು ಪಾಲಿಸುವುದು ಅಗತ್ಯ: ಡಿಸಿ ನಕುಲ್
ನಾರಾಯಣ ಗುರು ಜಯಂತಿ ಕಾರ್ಯಕ್ರಮ

ಕಾರವಾರ, ಸೆ.16: ಕೇರಳದಲ್ಲಿ ಭೀಕರವಾಗಿದ್ದ ಅಸ್ಪಶ್ಯತೆ ಪಿಡುಗಿನ ವಿರುದ್ಧ ಸಾಮಾಜಿಕ ಚಳವಳಿಯನ್ನು ನಡೆಸಿದ ನಾರಾಯಣ ಗುರು ಅವರು, ತಳಸಮುದಾಯದವರ ಅಭಿವೃದ್ಧಿ ಕುರಿತು ಸ್ಪಷ್ಟ ಮುಂದಾಲೋಚನೆ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಎಸ್‌ಎಸ್ ನಕುಲ್ ಹೇಳಿದರು.
ಅವರು ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ಅಸ್ಪಶ್ಯರೆನಿಸಿಕೊಂಡವರು ತಮ್ಮ ಬೆನ್ನ ಹಿಂದೆ ಪೊರಕೆಯನ್ನು ಕಟ್ಟಿಕೊಂಡು ನಡೆಯುವ ಪರಿಸ್ಥಿತಿಯಿತ್ತು. ಅಂತಹ ಪರಿಸರದಲ್ಲಿ ತಳಸಮುದಾಯದವರಿಗೆ ಪ್ರತ್ಯೇಕ ದೇವಾಲಯಗಳನ್ನು ನಿರ್ಮಿಸಿ ಧಾರ್ಮಿಕ ಸ್ವಾಭಿಮಾನ ಬೆಳೆಸಿದರು. ನಾರಾಯಣ ಗುರುಗಳಂತಹ ಸಮಾಜ ಸುಧಾರಕರ ತತ್ವ ಚಿಂತನೆಗಳನ್ನು ಪಾಲಿಸುವ ಅಗತ್ಯವಿದೆ. ಆದರೆ ಇಂದು ಸಮಾಜ ಸುಧಾರಕರು, ಸಂತರನ್ನು ದೈವೀಕರಿಸಿ ಅವರ ಆಲೋಚನೆಗಳಿಗೆ ಬಾಗಿಲು ಹಾಕುವಂತಹ ಪರಿಸ್ಥಿತಿ ಇರುವುದು ದುರದೃಷ್ಟಕರ ಎಂದರು.
ವಿಶೇಷ ಉಪನ್ಯಾಸ ನೀಡಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಬ್ರಹ್ಮಶ್ರೀ ನಾರಾಯಣ ಗುರು ಅವರು ಆಧ್ಯಾತ್ಮಿಕತೆಗೆ ವೈಚಾರಿಕ ಚಿಂತನೆಯನ್ನು ಸೇರಿಸಿ ಶೋಷಿತ ಜನ ಸಮುದಾಯದಲ್ಲಿ ಸ್ವಾಭಿಮಾನ ತುಂಬಲು ಪ್ರಯತ್ನಿಸಿದರು. ಶೋಷಿತ ಜನಾಂಗಕ್ಕೆ ದೇವಾಲಯಗಳಲ್ಲಿ ಪ್ರವೇಶ ನಿಷಿದ್ಧವಿದ್ದ ಸಂದರ್ಭದಲ್ಲಿ ಅವರು, ಹಲವು ಶಿವ ದೇವಾಲಯಗಳನ್ನು ನಿರ್ಮಿಸಿ ಎಲ್ಲ್ಲ ದೇವಾಲಯಗಳಲ್ಲೂ ಶೂದ್ರರು ಮುಕ್ತವಾಗಿ ಒಳ ಪ್ರವೇಶಿಸಿ ಪೂಜಿಸುವ ಅವಕಾಶ ಮಾಡಿಕೊಟ್ಟರು. ಕೊಳವಂಗೋಡದಲ್ಲಿ ನಿರ್ಮಿಸಿದ ದೇವಾಲಯದಲ್ಲಿ ಶಿವನ ಬದಲಾಗಿ ಕನ್ನಡಿಯನ್ನು ಪ್ರತಿಷ್ಠಾಪಿಸಿ ನಿಮ್ಮತನದಲ್ಲಿ ದೇವರನ್ನು ಕಾಣಿರಿ ಎಂದು ಜನರಿಗೆ ವಾಸ್ತವದ ನೆಲೆಯಲ್ಲಿ ಅರಿವು ಮೂಡಿಸಲು ಪ್ರಯತ್ನ ಪಟ್ಟರು. ಮದ್ಯ ತಯಾರಿಕೆ, ಕುಡಿಯುವುದು ಮತ್ತು ಮಾರುವುದರ ವಿರುದ್ಧ ಜಾಗೃತಿ ಮೂಡಿಸಿದ ನಾರಾಯಣ ಗುರುಗಳು ‘ಮೂರ್ತೆದಾರಿಕೆ’ಯನ್ನು ಕುಲಕಸುಬಾಗಿ ನಂಬಿಕೊಂಡಿದ್ದ ಈಳವ ಜನಾಂಗದವರಿಗೆೆ ಪರ್ಯಾಯವಾಗಿ ಅರವಿಪ್ಪುರಂನ ಶಿವದೇವಾಲಯದ ಪಕ್ಕ ಕೈ ಮಗ್ಗದ ತರಬೇತಿ ಕೇಂದ್ರ ತೆರೆದು ಉದ್ಯೋಗಾವಕಾಶ ಕಲ್ಪಿಸಿದರು. ನಾರಾಯಣ ಗುರುಗಳು ತಮ್ಮ ಮಠದಲ್ಲಿ ಜಾತಿವಾದಕ್ಕೆ ಅವಕಾಶವನ್ನೇ ನೀಡಲಿಲ್ಲ. ನಾರಾಯಣ ಗುರುಗಳ ಬಗ್ಗೆ ಶಾಲೆ ಕಾಲೇಜುಗಳಲ್ಲಿ ಸರಕಾರ ಪಠ್ಯವಾಗಿಸಿದರೆ ಹೊಸ ತಲೆಮಾರಿಗೆ ಅವರ ಚಿಂತನೆ ದಾಟಿಸಲು ಸಾಧ್ಯ ಎಂದು ಅರವಿಂದ ಕರ್ಕಿಕೋಡಿ ಹೇಳಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಉಪಸ್ಥಿತರಿದ್ದರು.







