11 ಸಾವಿರ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ: ಸಚಿವ ಕಾಗೋಡು ತಿಮ್ಮಪ್ಪ
ಕಂದಾಯ ಅಧಿಕಾರಿಗಳ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

ಮಡಿಕೇರಿ ಸೆ.16: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ಮತ್ತು ಮನೆಗಳನ್ನು ನಿರ್ಮಿಸಿಕೊಂಡ ಬಡವರ್ಗದ ಮಂದಿಗೆ ಜಾಗ ಮಂಜೂರಾತಿ ಮತ್ತು ಸಾಗುವಳಿ ಚೀಟಿ ವಿತರಣೆ ಮಾಡಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು 11 ಸಾವಿರ ಅರ್ಜಿಗಳನ್ನು ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯದ ಒಳಗೆ ವಿಲೇವಾರಿ ಮಾಡುವಂತೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಕಂದಾಯ ಅಧಿಕಾರಿಗಳ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕಂದಾಯ ಜಾಗಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸರಕಾರಿ ಜಮೀನನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡವರು ಜಾಗ ಮಂಜೂರಾತಿ ಕೋರಿ ಸಲ್ಲಿಸಿರುವ 94(ಎ) ಅರ್ಜಿಗಳನ್ನು ಮತ್ತು ಒತ್ತುವರಿ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಅದರ ಮಂಜೂರಾತಿಗೆ 94(ಬಿ)ಯಡಿ ಮಂಜೂರಾತಿ ಕೋರಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗೆ ಆದ್ಯ ಕ್ರಮ ವಹಿಸಬೇಕೆಂದು ಸ್ಪಷ್ಟಪಡಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ 94(ಎ) ಮತ್ತು 94 (ಬಿ) ಗೆ ಸಂಬಂಧಿಸಿದಂತೆ ರಾಜ್ಯದಲ್ಲೆ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ ಮೂರು ನಾಲ್ಕು ಜಿಲ್ಲೆಗಳಲ್ಲಿ ಕೊಡಗು ಒಂದಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಗಳ ಇತ್ಯರ್ಥಕ್ಕೆ ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಬಗರ್ ಹುಕುಂ ಹೆಚ್ಚುವರಿ ಸಮಿತಿಯನ್ನು ರಚಿಸಿಕೊಳ್ಳುವಂತೆ ಸೂಚಿಸಿದ ಸಚಿವರು, ಪ್ರತೀ ಶನಿವಾರ ಸಮಿತಿಯ ಸಭೆ ನಡೆಸುವ ಮೂಲಕ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ 94(ಬಿ)ಯಡಿ ಇಲ್ಲಿಯವರೆಗೆ 8,274 ಅರ್ಜಿಗಳಿಗೆ ಸಂಬಂಧಿಸಿದ 16,287 ಎಕರೆ ಜಾಗದ ವಿಚಾರವನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ಐದು ಎಕರೆಗೆ ಒಳಪಟ್ಟು ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರಿಂದ ಸರಕಾರಕ್ಕೆ ಪಾವತಿಸಬೇಕಾದ ಹಣಕ್ಕೆ ಒತ್ತಡ ಹೇರದೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ಕೆಲವು ದಶಕಗಳಿಂದ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸಿ ಬದುಕು ಸಾಗಿಸುತ್ತಿರುವ ಮಂದಿ ಫಾರಂ 50 ಮತ್ತು 53 ರಡಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ, ಅಗತ್ಯವಾಗಿ ಅಂತಹವರಿಗೆ ಸಾಗುವಳಿ ಮಾಡಿದ ಜಾಗವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದರು. ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಪಂ ಪಿಡಿಒಗಳೊಂದಿಗೆ ಸಭೆ ನಡೆಸಿ ಬಡವರ್ಗದ ಮಂದಿ ಸರಕಾರಿ ಜಾಗ ಒತ್ತುವರಿ ಮಾಡಿ ನೆಲೆಸಿರುವ ಮನೆಯ ಹಕ್ಕುದಾರಿಕೆಯನ್ನು ನೀಡಬೇಕೆಂದು ಹೇಳಿದರು.
ಕೊಡಗಿನ ಸಿ ಮತ್ತು ಡಿ ವರ್ಗದ ಜಾಗ ಮತ್ತು ಬಾಣೆೆ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಬೆಂಗಳೂರಿನಲ್ಲಿ ಇಲಾಖಾಧಿಕಾರಿಗಳ ಸಭೆ ನಡೆಸುವ ಇಂಗಿತವನ್ನು ಸಚಿವ ಕಾಗೋಡು ತಿಮ್ಮಪ್ಪ ವ್ಯಕ್ತಪಡಿಸಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸಿ ಮತ್ತು ಡಿ ವರ್ಗದ ಭೂಮಿ ಯನ್ನು ಲ್ಯಾಂಡ್ ಬ್ಯಾಂಕ್ ಆಧಾರದಲ್ಲಿ ಈ ಹಿಂದೆ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಇಂತಹ ಸಿ ಮತ್ತು ಡಿ ಜಾಗದ ಒತ್ತುವ ರಿಗಳನ್ನು ಮಂಜೂರು ಮಾಡಿಕೊಡಲು ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದ್ದು, ಜಾಗ ಅರಣ್ಯ ಇಲಾಖೆಗೆ ಸೇರಿದ್ದೆಂದು ತಕರಾರು ಮಾಡುತ್ತಿರುವುದನ್ನು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾಗೋಡು ತಿಮ್ಮಪ್ಪ, ಸರಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ವೊಂದನ್ನು ಹೊರಡಿಸಿ, ಯಾವೆಲ್ಲ ಸಿ ಮತ್ತು ಡಿ ವರ್ಗದ ಜಾಗದಲ್ಲಿ ನಿಜಕ್ಕೂ ಅರಣ್ಯ ಇಲಾಖೆ ಅರಣ್ಯವನ್ನು ಬೆಳೆಸಿದೆಯೋ ಅವುಗಳನ್ನು ಬಿಟ್ಟು ಉಳಿದ ಖಾಲಿ ಜಾಗವನ್ನು ಮರಳಿ ಪಡೆಯಲು ಸೂಚಿಸಿರುವುದಾಗಿ ತಿಳಿಸಿದರು. ಇದಕ್ಕೆ ಕೆ.ಜಿ. ಬೋಪಯ್ಯ ಅವರು, ಜಿಲ್ಲೆಯಲ್ಲಿ ಸಿ ಮತ್ತು ಡಿ ವರ್ಗದ ಜಾಗವನ್ನು ಅರಣ್ಯಕ್ಕೆ ಸೇರಿದೆಂದು ಹೇಳುತ್ತಿರ
ುವುದಲ್ಲದೆ ಆರ್‌ಟಿಸಿಯಲ್ಲೂ ಅರಣ್ಯವೆಂದು ನಮೂದಾಗಿದೆ ಎಂದು ಗಮನ ಸೆಳೆದರು. ಇದಕ್ಕೂ ಮೊದಲು ಶಾಸಕ ಅಪ್ಪಚ್ಚು ರಂಜನ್ ಅವರು, ಜಿಲ್ಲೆಯಲ್ಲಿ 1994 ರಲ್ಲಿ ಸಿ ಮತ್ತು ಡಿ ವರ್ಗಕ್ಕೆ ಸೇರಿದ 2.58 ಲಕ್ಷ ಹೆಕ್ಟೇರ್ ಜಾಗದಲ್ಲಿ 1.31 ಲಕ್ಷ ಹೆಕ್ಟೇರನ್ನು ಲ್ಯಾಂಡ್ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಇದನ್ನು ಭೌತಿಕ ಸರ್ವೇ ಮಾಡದೆ ಅರಣ್ಯ ಇಲಾಖೆಗೆ ಸೇರಿದ್ದೆಂದು ಹೇಳುವುದಾದರು ಹೇಗೆಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಚಿವ ಕಾಗೋಡು ತಿಮ್ಮಪ್ಪ ಅವರು, ಆಯಾ ಕಂದಾಯ ಅಧಿಕಾರಿಗಳ ಮೂಲಕ ಸಿ ಮತ್ತು ಡಿ ವರ್ಗದ ಜಾಗವನ್ನು ಪರಿಶೀಲಿಸಿ ಅರಣ್ಯವಲ್ಲದ ಜಾಗದ ಬಗ್ಗೆ ವಿವರವಾದ ಮಾಹಿತಿಯನ್ನು ಕ್ರೋಢೀಕರಿಸಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು.
ಸಭೆೆಯಲ್ಲಿ ಎಂಎಲ್ಸಿ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಸಿಇಒ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.
‘ಬಡವರಿಗೆ ನಿವೇಶನ ನೀಡಲು ಜಾಗ ಗುರುತಿಸಿ’
ಗರಸಭಾ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಹಂಚಲು ಸೂಕ್ತ ಜಾಗವನ್ನು ಗುರುತಿಸುವಂತೆ ನಗರಸಭೆಯ ನೂತನ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರಿಗೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪಸಲಹೆ ನೀಡಿದ್ದಾರೆ.
ಇಂದು ಕಾವೇರಮ್ಮ ಸೋಮಣ್ಣ ಅವರು ನಗರಸಭೆೆಯ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ ಸಚಿವ ಕಾಗೋಡು ತಿಮ್ಮಪ್ಪ ನವರನ್ನು ಭೇಟಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಕೋರಿದರು. ಈ ಸಂದಭರ್ ಮಾತನಾಡಿದ ಸಚಿವರು, ನಗರದಲ್ಲಿ ಅನೇಕ ಮಂದಿ ಬಡವರು ನಿವೇಶನ ರಹಿತರಿದ್ದು, ಇವರಿಗೆ ನಿವೇಶನವನ್ನು ಒದಗಿಸಲು ಮೊದಲ ಆದ್ಯತೆ ನೀಡುವಂತೆ ತಿಳಿಸಿದರು.
ನಿವೇಶನ ಹಂಚಿಕೆಗೆ ಸೂಕ್ತ ಜಾಗ ಗುರುತಿಸಿ ತಮಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಪ್ರತೀ ದಿನ ಬೆಳಗ್ಗೆ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವಂತೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರಿಗೆ ಸಚಿವರು ಕಿವಿಮಾತು ಹೇಳಿದರು.
ಇದಕ್ಕೂ ಮೊದಲು ನಗರಸಭೆ ಕಚೆೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಕಾವೇರಮ್ಮ ಸೋಮಣ್ಣ, ಕುಡಿಯುವ ನೀರು ಮತ್ತು ಖಾಸಗಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ದಸರಾ ಹಬ್ಬ ಸಮೀಪಿಸುತ್ತಿರುವುದರಿಂದ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಪಕ್ಷಾತೀತವಾಗಿ ಹಾಗೂ ರಾಜಕೀಯ ರಹಿತವಾಗಿ ಎಲ್ಲರ ಸಲಹೆಯನ್ನು ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ಕಾವೇರಮ್ಮ ಸೋಮಣ್ಣ ಹೇಳಿದರು.
ಅಧಿಕಾರ ಸ್ವೀಕಾರದ ಸಂದಭರ್ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಕೆ.ಕೆ. ಮಂಜುನಾಥ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್, ಜಿಪಂ ಸದಸ್ಯರಾದ ಕೆ.ಪಿ. ಚಂದ್ರಕಲಾ, ಲತೀಫ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಧರ್ಮಪ್ಪ, ತಾಲೂಕು ಪಂಚಾಯತ್ ಸದಸ್ಯ ನೆರವಂಡ ಉಮೇಶ್ ಹಾಗೂ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಸೇರಿದಂತೆ ಅನೇಕರು ಕಾವೇರಮ್ಮ ಸೋಮಣ್ಣ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.
ಬಾಣೆ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ: ಕೊಡಗಿನ ಬಾಣೆೆ ಜಾಗಕ್ಕೆ ಕಂದಾಯ ನಿಗದಿಪಡಿಸಲು ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದರೂ, ಇಲ್ಲಿಯವರೆಗೆ ಅದರ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕಾರ್ಯಕ್ಕಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇಮಕದ ಅಗತ್ಯವಿಲ್ಲವೆಂದು ಶಾಸಕ ಕೆ.ಜಿ. ಬೋಪಯ್ಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ಸಮಸ್ಯೆ ಬಗೆಹರಿಕೆಗೆ ಬೆಂಗಳೂರಿನಲ್ಲಿ ಸಭೆ ಕರೆಯುವುದಾಗಿ ಸಚಿವರು ತಿಳಿಸಿದರು.
ಅನುಷ್ಠಾನಕ್ಕೆ ಪರಿಸರವಾದಿಗಳ ಅಡ್ಡಿ:
ಅ
ರಣ್ಯವಾಸಿ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಮತ್ತು ಸಮುದಾಯದ ಹಕ್ಕುಗಳನ್ನು ಒದಗಿಸಲು ಪರಿಸರವಾದಿಗಳು ಅಡ್ಡಿ ಪಡಿಸುತ್ತಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ಬೇಸರ ವ್ಯಕ್ತಪಡಿಸಿದರು. 2006 ರಲ್ಲಿ ಜಾರಿಯಾದ ಅರಣ್ಯ ಹಕ್ಕು ಕಾಯ್ದೆಯನ್ನು ಇನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗದಿರುವ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿದರು. ಆದಷ್ಟು ಶೀಘ್ರ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದರು.







