19 ರಂದು ಕಾವೇರಿ ಕಣಿವೆಯ 8 ಜಿಲ್ಲೆಗಳ ಬೃಹತ್ ಸಮಾವೇಶ
ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೈತ ಒಕ್ಕೂಟ

ಮಡಿಕೇರಿ, ಸೆ.16: ಕಾವೇರಿ ನದಿ ನೀರಿನ ವಿವಾದವನ್ನು ಸಮರ್ಥವಾಗಿ ಬಗೆಹರಿಸಬೇಕೆನ್ನುವ ಉದ್ದೇಶದಿಂದ ಕಾವೇರಿ ನೀರನ್ನು ಬಳಕೆ ಮಾಡುತ್ತಿರುವ 8 ಜಿಲ್ಲೆಗಳ ರೈತರ ಹಾಗೂ ಜನಪ್ರತಿನಿಧಿಗಳ ಬೃಹತ್ ಸಮಾವೇಶವನ್ನು ಸೆ.19 ರಂದು ಮಂಡ್ಯದಲ್ಲಿ ನಡೆಸಲಾಗುತ್ತಿದೆ ಎಂದು ಕಾವೇರಿ ಕಣಿವೆ ರೈತ ಒಕ್ಕೂಟ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಯೋಗಣ್ಣ, ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು. ಎರಡೂ ರಾಜ್ಯಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಗ್ರ ರಾಷ್ಟ್ರೀಯ ಜಲ ನೀತಿಯನ್ನು ತುರ್ತಾಗಿ ರೂಪಿಸಬೇಕು. ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಕಾರ್ಯಸೂಚಿ ರೂಪಿಸಲು ಶಾಶ್ವತವಾದ ಕಾನೂನಾತ್ಮಕ, ತಾಂತ್ರಿಕ ಮತ್ತು ನೀರಾವರಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು, ಕಾವೇರಿ ಕಣಿವೆಯ ಎಂಟು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯಿದ್ದು, ಪರಿಹಾರವಾಗಿ ಪ್ರತೀ ಎಕರೆಗೆ 50 ಸಾವಿರ ರೂ. ನೀಡಬೇಕು. ರೈತರ ಮತ್ತು ಕೃಷಿ ಕಾರ್ಮಿಕರ ಸಾಲ ಮನ್ನಾ ಮಾಡಬೇಕು, ಅರಣ್ಯ ನಾಶ ತಡೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೇವಲ ಬೆಂಗಳೂರು ನಗರದ ಅಭಿವೃದ್ಧಿಯನ್ನೆ ಗುರಿಯಾಗಿಸಿಕೊಳ್ಳದೆ, ಇತರ ಜಿಲ್ಲೆಗಳಿಗೂ ಅಭಿವೃದ್ಧಿ ಯೋಜನೆಗಳನ್ನು ವಿಸ್ತರಿಸಬೇಕು ಮತ್ತು ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಾಸ್ ಪಡೆಯಬೇಕೆಂದು ಯೋಗಣ್ಣ ಒತ್ತಾಯಿಸಿದರು.
ಕನ್ನಡ ಸೇನೆಯ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕಾವೇರಿ ಕಣಿವೆಯ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ತುಮಕೂರು, ಬೆಂಗಳೂರು ಹಾಗೂ ಕೊಡಗು ಜಿಲ್ಲೆಗಳ ರೈತರನ್ನು ಒಳಗೊಂಡ ಒಕ್ಕೂಟ ರಚಿಸಲಾಗಿದ್ದು, ಹೋರಾಟವನ್ನು ಅರ್ಥಪೂರ್ಣಗೊಳಿಸಲಾಗುವುದೆಂದರು.
ರೈತರು, ಪ್ರಗತಿಪರರು ಹಾಗೂ ಕನ್ನಡ ಪರ ಸಂಘಟನೆಗಳು ಸೆ.19 ರಂದು ನಡೆಸುತ್ತಿರುವ ಸಮಾವೇಶದಲ್ಲಿ ಈ ಭಾಗವನ್ನು ಪ್ರತಿನಿಧಿಸುತ್ತಿರುವ 40 ಮಂದಿ ಶಾಸಕರು ಹಾಗೂ ಎಂಟು ಮಂದಿ ಸಂಸದರು ಪಾಲ್ಗೊಳ್ಳದಿದ್ದಲ್ಲಿ ಇವರ ವಿರುದ್ಧವೇ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರುವ ಸರಕಾರಗಳು ಕಾವೇರಿ ವಿವಾದವನ್ನು ಸಮರ್ಥವಾಗಿ ಬಗೆಹರಿಸುವಲ್ಲಿ ಮತ್ತು ರಾಜ್ಯದ ಪಾಲಿನ ನೀರನ್ನು ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿವೆಯೆಂದು ಮಂಜುನಾಥ್ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿವಾದದಲ್ಲಿ ಮಧ್ಯ ಪ್ರವೇಶ ಮಾಡದೆ ವೌನ ವಹಿಸಿರುವುದೇ ಕರ್ನಾಟಕ ರಾಜ್ಯಕ್ಕೆ ಹಿನ್ನಡೆಯಾಗಲು ಕಾರಣವೆಂದು ಟೀಕಿಸಿದರು.
ಸೆ.19 ರಂದು ಪ್ರತಿಭಟನಾ ಸಮಾವೇಶ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ಮತ್ತು ರೈತ ಸಭಾ ಭವನದಲ್ಲಿ ನಡೆಯಲಿದ್ದು, ಕೊಡಗಿನ ಶಾಸಕರು ಕೂಡ ಪಾಲ್ಗೊಳ್ಳಬೇಕೆಂದು ಮಂಜುನಾಥ್ ಕುಮಾರ್ ಮನವಿ ಮಾಡಿದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಪ್ರಮುಖರಾದ ಜಿ.ಎಂ. ಶಿವ ಕುಮಾರ್, ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ಹಾಗೂ ಮುಹಮ್ಮದ್ ಕುಂಞಿ ಉಪಸ್ಥಿತರಿದ್ದರು.







