ಮರಳು ಸಾಗಣೆ: ಗ್ರಾಪಂಗಳಿಗೆ ರಾಜಧನ ಪಾವತಿಸುವಂತೆ ಮನವಿ
ಕರ್ನಾಟಕ ಮಾಯ್ನರ್ ಮಿನರಲ್ ಕನ್ಸೆಷನ್ ರೂಲ್ಸ್ 1994, ಕಂಡಿಕೆ 31-ಎಸ್(ಸಿ)ರ ಅನ್ವಯ ಬಿಡುಗಡೆಗೆ ಒತ್ತಾಯ
ಅಂಕೋಲಾ, ಕಾರವಾರ ತಾಲೂಕಿನಲ್ಲಿ ಸರಕಾರದ ಹೊಸ ಮರಳು ನೀತಿಯಂತೆ ಮರಳು ಸಾಗಣೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಸರಕಾರದ ನಿಯಮದಂತೆ ಮರಳು ಸಾಗಣೆ ರಾಜಧನ ಸಲ್ಲಿಸಬೇಕಾಗಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ಆ ಪ್ರಕಾರ 2015-16ರ ಸಾಲಿನಲ್ಲಿ ಕಾರವಾರ ತಾಲೂಕಿನ ಕಿನ್ನರದಲ್ಲಿ 68,01,000 ರೂ. ವೈಲವಾಡಾದಲ್ಲಿ 17,70,000ರೂ. ಘಾಡಸಾಯಿಯಲ್ಲಿ 26,94,000ರೂ. ಹಾಗೂ ಅಂಕೋಲಾ ತಾಲೂಕಿನ ಸಗಡಗೇರಿಯಲ್ಲಿ 11,70,000 ರೂ. ರಾಜಧನ ಪಾವತಿಯಾಗಿದೆ. ಎರಡೂ ತಾಲೂಕಿನಲ್ಲಿ ಒಟ್ಟು ಮೊತ್ತ ರೂ.1,24,35,000 ರೂ. ರಾಜಧನ ಪಾವತಿಯಾಗಿದೆ. ಮರಳು ಸಾಗಣೆ ನಡೆಸುತ್ತಿರುವ ಗ್ರಾಪಂ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದು ತೀರಾ ಸಾಮಾನ್ಯವಾಗಿದೆ. ಅತ್ಯಲ್ಪ ಅನುದಾನ ಹೊಂದಿರುವ ಎಲ್ಲ ಗ್ರಾಪಂಗಳು ಈ ರಸ್ತೆಗಳನ್ನು ದುರಸ್ತಿ ಮಾಡುವುದು ತೀರಾ ಕಷ್ಟಕರ. ಇದರಿಂದ ಸಂಬಂಧಿತ ಗ್ರಾಪಂಗೆ ಅನಾನುಕೂಲವಾಗುತ್ತಿದೆ. ಸರಕಾರಕ್ಕೆ ಸಲ್ಲಿಸುವ ರಾಜಧನದಲ್ಲಿ ಸಂಬಂಧಿತ ಗ್ರಾಪಂಗೆ ಕರ್ನಾಟಕ ಮಾಯ್ನರ್ ಮಿನರಲ್ ಕನ್ಸೆಷನ್ ರೂಲ್ಸ್ 1994, ಕಂಡಿಕೆ 31-ಎಸ್(ಸಿ)ರ ಅನ್ವಯ ಆಕರಣೆಯಾದ ರಾಜಧನದ ಶೇ.25%ರಷ್ಟನ್ನು ಬಿಡುಗಡೆ ಮಾಡಬೇಕಾಗಿದೆೆ ಎಂದರು.
ಕಾರವಾರ, ಅಂಕೋಲಾ ಕ್ಷೇತ್ರದಲ್ಲಿ ಈವರೆಗೂ ಸಂಬಂಧಿತ ಗ್ರಾಪಂಗಳಿಗೆ ಯಾವುದೇ ಹಣ ಸಂದಾಯವಾಗಿಲ್ಲ. ಪಂಚಾಯತ್‌ಗಳಿಗೆ ನ್ಯಾಯಯುತವಾಗಿ ಬರಬೇಕಾದ ರಾಜಧನದ ಶೇ.25ರಷ್ಟು ಮೊತ್ತದಲ್ಲಿ ಕಿನ್ನರ ಗ್ರಾಪಂಗೆ 17,00,250 ರೂ., ವೈಲವಾಡಾ ಗ್ರಾಪಂಗೆ 4,42,500 ರೂ., ಘಾಡಸಾಯಿ ಗ್ರಾಪಂಗೆ 6,73,500ರೂ. ಮತ್ತು ಅಂಕೋಲಾದ ಸಗಡಗೇರಿ ಗ್ರಾಪಂಗೆ 2,92,500ರೂ. ಬರಬೇಕಾದ ಪಾಲಿನ ಹಣವನ್ನು ಕೂಡಲೇ ಸಂದಾಯ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಂಬಂಧಿತ ಇಲಾಖೆಗೆ ತಾವು ಸೂಚಿಸಿರುವುದಾಗಿ ಶಾಸಕ ಸತೀಶ ಸೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







