ದಲಿತ ಯುವನಾಯಕ ಜಿಗ್ನೇಶ್ ಮೆವಾನಿ ಬಂಧನ
ಗುಜರಾತ್ ಪೊಲೀಸರ ವಶದಲ್ಲಿ

ಅಹ್ಮದಾಬಾದ್, ಸೆ.16: ದಿಲ್ಲಿಯ ಕಾರ್ಯಕ್ರಮವೊಂದನ್ನು ಮುಗಿಸಿ ಗುಜರಾತಿಗೆ ವಾಪಸಾ ಗುತ್ತಿದ್ದ ವೇಳೆ ಖ್ಯಾತ ದಲಿತ ಯುವನಾಯಕ ಜಿಗ್ನೇಶ್ ಮೆವಾನಿ ಅವರನ್ನು ಗುಜರಾತ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಕುರಿತಂತೆ ದೇಶದ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸೆಪ್ಟಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಭಾರೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೋದಿ ಅವರು ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಎರಡು ಗಂಟೆಗೆ ಮೊದಲು ಈ ಬಂಧನ ನಡೆದಿದೆ. ಭದ್ರತೆಯ ನೆಪವನ್ನು ಮುಂದಿಟ್ಟು ಜಿಗ್ನೇಶ್ ಮೆವಾನಿ ಅವರನ್ನು ಪೊಲೀಸರು ಬಂಧಿಸಿ ನಿಗೂಢ ಸ್ಥಳಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಲಾಗಿದೆ. ದಿಲ್ಲಿಯಲ್ಲಿ ಇಂದು ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಜಿಗ್ನೇಶ್ ಅವರು, ದಲಿತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಕ್ಟೋಬರ್ 1ರಂದು ಗುಜರಾತ್‌ನಲ್ಲಿ ರೈಲು ತಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಎಚ್ಚರಿಸಿದ್ದರು.
ಉನ ದಲಿತರ ದೌರ್ಜನ್ಯದ ಬಳಿಕ ಇಡೀ ಗುಜರಾತ್‌ನಲ್ಲಿ ದಲಿತರನ್ನು ಸಂಘಟಿಸುವಲ್ಲಿ ಜಿಗ್ನೇಶ್ ಯಶಸ್ವಿಯಾಗಿದ್ದು, ಸಂಘಪರಿವಾರಕ್ಕೆ ಇವರು ಭಾರೀ ತಲೆನೋವಾಗಿ ಪರಿಣಮಿಸಿದ್ದಾರೆ.





