ನರಸಿಂಗ್ ಯಾದವ್ ಡೋಪಿಂಗ್ ಪ್ರಕರಣ ಸಿಬಿಐಗೆ

ಹೊಸದಿಲ್ಲಿ, ಸೆ.16: ಕುಸ್ತಿಪಟು ನರಸಿಂಗ್ ಯಾದವ್ ಒಳಗೊಂಡಿರುವ ಡೋಪಿಂಗ್ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೆ ವರ್ಗಾವಣೆ ಮಾಡಲು ಪ್ರಧಾನ ಮಂತ್ರಿ ಕಚೇರಿ(ಪಿಎಂಒ) ಸೂಚನೆ ನೀಡಿದೆ ಎಂದು ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಅಧ್ಯಕ್ಷರು ಶುಕ್ರವಾರ ತಿಳಿಸಿದ್ದಾರೆ.
''ನಾನು ಆಗಸ್ಟ್ 28 ರಂದು ಪ್ರಧಾನಮಂತ್ರಿ ಕಚೇರಿಗೆ ತೆರಳಿ ಡೋಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವಂತೆ ವಿನಂತಿಸಿಕೊಂಡಿದ್ದೆ. ಜನರು ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಾಗಿದೆ. ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕೆಂದು ವಿನಂತಿಸಿದ್ದೆವು. ಇದೀ ಪಿಎಂಒ ಪ್ರಕರಣವನ್ನು ಸಿಬಿಐ ತನಿಖೆಗೆ ಸೂಚಿಸಿದ್ದಕ್ಕೆ ಸಂತೋಷವಾಗುತ್ತಿದೆ'' ಎಂದು ಡಬ್ಲುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ.
ಯಾದವ್ ಮಾದರಿಯನ್ನು ಜೂ.25 ಹಾಗೂ ಜುಲೈ 5 ರಂದು ಪಡೆಯಲಾಗಿತ್ತು. ರಿಯೋ ಒಲಿಂಪಿಕ್ಸ್ ಆರಂಭವಾಗಲು ಕೆಲವೇ ಸಮಯವಿರುವಾಗ ಡೋಪಿಂಗ್ ಪರೀಕ್ಷೆಯಲ್ಲಿ ಯಾದವ್ ಅನುತ್ತೀರ್ಣರಾಗಿದ್ದರು. ಒಲಿಂಪಿಕ್ಸ್‌ನಲ್ಲಿ 74 ಕೆಜಿ ತೂಕ ವಿಭಾಗದಲ್ಲಿ ಯಾದವ್ ಸ್ಪರ್ಧಿಸಬೇಕಾಗಿತ್ತು.
ಸೋನೆಪತ್‌ನ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿದ್ದಾಗ ನಾನು ಸೇವಿಸುವ ಆಹಾರದಲ್ಲಿ ಕಲೆಬೆರಕೆ ಮಾಡಲಾಗಿದ್ದು, ನನ್ನನ್ನು ಉದ್ದೇಶಪೂರ್ವಕವಾಗಿ ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದರಲ್ಲಿ ದೊಡ್ಡ ಪಿತೂರಿಯಿದೆ ಎಂದು ಯಾದವ್ ಆರೋಪಿಸಿದ್ದರು.
ರಾಷ್ಟ್ರೀಯ ಉದ್ದೀಪನಾ ತಡೆ ಘಟಕ(ನಾಡಾ) ಯಾದವ್‌ಗೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು. ಆದರೆ, ರಿಯೋ ಗೇಮ್ಸ್‌ಗೆ ಆರಂಭಕ್ಕೆ ಕೆಲವೇ ಸಮಯದ ಮೊದಲು ವಿಶ್ವ ಉದ್ದೀಪನಾ ತಡೆ ಘಟಕ(ವಾಡಾ) ನಾಡಾ ಸಮಿತಿಯ ತೀರ್ಪಿನ ವಿರುದ್ಧ ಕ್ರೀಡಾ ಪಂಚಾಯಿತಿ ನ್ಯಾಯಾಲಯದಲ್ಲಿ (ಸಿಎಎಸ್)ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಸಿಎಎಸ್ ಯಾದವ್‌ಗೆ 4 ವರ್ಷ ನಿಷೇಧ ಹೇರಿದ್ದಲ್ಲದೆ, ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅನರ್ಹ ಎಂದು ತೀರ್ಪು ನೀಡಿತ್ತು.







