ಅಭ್ಯಾಸದ ವೇಳೆ ಅವಘಡ, ಮಿಚೆಲ್ ಸ್ಟಾರ್ಕ್‌ಗೆ ಶಸ್ತ್ರಚಿಕಿತ್ಸೆ
ಸಿಡ್ನಿ, ಸೆ.16: ಅಭ್ಯಾಸದ ವೇಳೆ ನಡೆದ ಅವಘಡದಿಂದ ಕಾಲಿಗೆ ಗಂಭೀರ ಗಾಯಮಾಡಿಕೊಂಡು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರುವ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಕಾಲಿಗೆ 30 ಹೊಲಿಗೆಗಳನ್ನು ಹಾಕಲಾಗಿದೆ.
ಗುರುವಾರ ಅಭ್ಯಾಸದ ವೇಳೆ ತರಬೇತಿ ಸಾಧನವೊಂದು ಕಾಲಿನ ಮೇಲೆ ಬಿದ್ದ ಪರಿಣಾಮ ಸ್ಟಾರ್ಕ್ ಕಾಲಿಗೆ ಗಂಭೀರ ಗಾಯವಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸ್ಟಾರ್ಕ್ ಚೇತರಿಸಿಕೊಳ್ಳಲು ಮೂರು ವಾರಗಳ ಅಗತ್ಯವಿತ್ತು. ಈ ಹಿನ್ನೆಲಯಲ್ಲಿ ಅವರು ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಆಸ್ಟ್ರೇಲಿಯ ತಂಡದಲ್ಲಿ ಲಭ್ಯವಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ವೈದ್ಯಾಧಿಕಾರಿ ಜಾನ್ ಒರ್ಚರ್ಡ್ ತಿಳಿಸಿದ್ದಾರೆ.
ಸ್ಟಾರ್ಕ್ ಕಾಲಿನಲ್ಲಿ ಮೂಳೆ ಮುರಿತವಾಗಲಿ ಇಲ್ಲವೇ ನರದಲ್ಲಿ ಯಾವುದೇ ಹಾನಿಯಾಗಿದ್ದು ಕಂಡುಬಂದಿಲ್ಲ. ಗಾಯದಿಂದ ಮುಕ್ತವಾಗಲು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ಕಾಲಿಗೆ ಸುಮಾರು 30 ಹೊಲಿಗೆಗಳನ್ನು ಹಾಕಲಾಗಿದೆ. ಅವರು ಕಾಲನ್ನು ಅಲುಗಾಡಿಸುವ ತನಕ ಆಸ್ಪತ್ರೆಯಲ್ಲಿರುತ್ತಾರೆ. 2 ರಿಂದ 3ವಾರದಲ್ಲಿ ಅವರ ಸ್ಟಿಚ್‌ಗಳನ್ನು ತೆಗೆಯಲಾಗುತ್ತದೆ''ಎಂದು ಜಾನ್ ಒರ್ಚರ್ಡ್ ಹೇಳಿದ್ದಾರೆ.
ಸ್ಟಾರ್ಕ್ ಈ ವರ್ಷಾರಂಭದಲ್ಲಿ ಮಂಡಿನೋವಿಗೆ ತುತ್ತಾಗಿದ್ದರು. ಕಳೆದ ತಿಂಗಳು ನಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 24 ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು.







