ನ್ಯೂಝಿಲೆಂಡ್ ತಂಡ 324/7 ಡಿಕ್ಲೇರ್
ಮುಂಬೈ ವಿರುದ್ಧ ಅಭ್ಯಾಸ ಪಂದ್ಯ
ಹೊಸದಿಲ್ಲಿ, ಸೆ.16: ಪ್ರವಾಸಿ ನ್ಯೂಝಿಲೆಂಡ್ ಕ್ರಿಕೆಟ್ ತಂಡ ಆತಿಥೇಯ ಮುಂಬೈ ರಣಜಿ ತಂಡದ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾದ ಅಭ್ಯಾಸ ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.
ಮೊದಲ ದಿನದಾಟದಂತ್ಯಕ್ಕೆ ಮುಂಬೈ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದೆ. ಪಿಚ್ ಹುಲ್ಲಿನಿಂದ ಆವೃತ್ತವಾಗಿದ್ದ ಹಿನ್ನೆಲೆಯಲ್ಲಿ ಚೆಂಡು ಸ್ಪಿನ್ನರ್‌ಗೆ ಹೆಚ್ಚು ನೆರವಾಗಲಿಲ್ಲ. ಇದರ ಲಾಭ ಪಡೆದ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ನಿರ್ಭಿತಿಯಿಂದ ಬ್ಯಾಟಿಂಗ್ ಮಾಡಿದರು.
ನಾಯಕ ಕೇನ್ ವಿಲಿಯಮ್ಸನ್(50ರನ್, 56 ಎಸೆತ), ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಲಾಥಮ್(55 ರನ್, 97 ಎಸೆತ) ಹಾಗೂ ಮಿಚೆಲ್ ಸ್ಯಾಂಟ್ನರ್(45 ರನ್, 59 ಎಸೆತ) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ದಿನದಾಟ ಕೊನೆಗೊಳ್ಳುವ ಒಂದು ಗಂಟೆಗೆ ಮೊದಲೇ 7 ವಿಕೆಟ್ ನಷ್ಟಕ್ಕೆ 324 ರನ್‌ಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ನ್ಯೂಝಿಲೆಂಡ್‌ನ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಮುಂಬೈ 13 ಓವರ್‌ಗಳಲ್ಲಿ 1 ವಿಕೆಟ್‌ನ ನಷ್ಟಕ್ಕೆ 29 ರನ್ ಗಳಿಸಿದೆ. ಪ್ರತಿಭಾವಂತ ಬ್ಯಾಟ್ಸ್‌ಮನ್ ಅರ್ಮಾನ್ ಜಾಫರ್(24) ಹಾಗೂ ಕೌಸ್ತುಭ್ ಪವಾರ್(5) ಕ್ರೀಸ್ ಕಾಯ್ದುಕೊಂಡಿದ್ದರು.
ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮುಂಬೈನ ಆರಂಭಿಕ ಆಟಗಾರ ಜೈ ಬಿಶ್ತ್(0)ರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ಗೆ ಕಳುಹಿಸಿದರು.
ಮುಂಬೈನ ಪರ ಬೌಲಿಂಗ್ ವಿಭಾಗದಲ್ಲಿ ಬಲ್ವಿಂದರ್ ಸಂಧು ಜೂನಿಯರ್ 2 ವಿಕೆಟ್‌ಗಳನ್ನು ಪಡೆದರು. ಮೂವರು ಸ್ಪಿನ್ನರ್‌ಗಳಾದ ವಿಶಾಲ್ ದಾಭೋಲ್ಕರ್, ಸಿದ್ದೇಶ್ ಲಾಡ್ ಹಾಗೂ ವಿಜಯ್ ಗೊಹಿಲ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್ ಮೋಡಿಯಿಂದ ಕಾಡಿದರು.
ನ್ಯೂಝಿಲೆಂಡ್‌ನ 9 ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಅವಕಾಶ ಪಡೆದಿದ್ದು, ತಂಡದ 15 ಆಟಗಾರರಿಗೆ ಆಡುವ ಅವಕಾಶವಿದೆ. ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭೋಜನ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತ್ತು.
ವೇಗದ ಬೌಲರ್ ಸಂಧು ಫಾರ್ಮ್‌ನಲ್ಲಿಲ್ಲದ ಮಾರ್ಟಿನ್ ಗಪ್ಟಿಲ್‌ರನ್ನು ಔಟ್ ಮಾಡಿದ ಬೆನ್ನಿಗೆ 2ನೆ ವಿಕೆಟ್‌ಗೆ 85 ರನ್ ಜೊತೆಯಾಟ ನಡೆಸಿದ ವಿಲಿಯಮ್ಸನ್ ಹಾಗೂ ಲಾಥಮ್ ತಂಡವನ್ನು ಆಧರಿಸಿದರು. ನಾಯಕ ವಿಲಿಯಮ್ಸನ್ ಅವರು ಸಂಧುಗೆ ವಿಕೆಟ್ ಒಪ್ಪಿಸುವ ಮೊದಲು 56 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ಗಳಿದ್ದ ಬರೋಬ್ಬರಿ 50 ರನ್ ಗಳಿಸಿ ಔಟಾದರು.
ಹೆನ್ರಿ ನಿಕೊಲ್ಸ್(29), ಬಿಜೆ ವ್ಯಾಟ್ಲಿಂಗ್(21), ಮಾರ್ಕ್ ಕ್ರೆಗ್(ಔಟಾಗದೆ 33) ಹಾಗೂ ಐಸ್ ಸೋಧಿ(ಔಟಾಗದೆ 29) ಕ್ರೀಸ್‌ನಲ್ಲಿ ಕೆಲವು ಸಮಯ ಕಳೆದರು. ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾದ ಕ್ರೆಗ್ ಹಾಗೂ ಸೋಧಿ ಔಟಾಗದೆ 43 ರನ್ ಸೇರಿಸಿ ಉತ್ತಮ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 75 ಓವರ್‌ಗಳಲ್ಲಿ 324/7
(ವಿಲಿಯಮ್ಸನ್ 50,ಲಾಥಮ್ 55, ಟೇಲರ್ 41, ಸಂಧು 2-21)
ಮುಂಬೈ: 13 ಓವರ್‌ಗಳಲ್ಲಿ 29/1







