ಬಂಪರ್ ಬೆಳೆ ಬಂದರೂ ಬೆಲೆ ಕುಸಿತ: ಈರುಳ್ಳಿ ಬೆಳೆದ ರೈತರಿಗೀಗ ಕಣ್ಣೀರ ಸರದಿ

ಬೆಂಗಳೂರು, ಸೆ.16: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆಯ ಮಧ್ಯೆಯೇ ಈ ಬಾರಿ ಈರುಳ್ಳಿ(ಉಳ್ಳಾಗಡ್ಡಿ) ಬಂಪರ್ ಬೆಳೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತದ ಪರಿಣಾಮ ರೈತರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿದೆ. ಆದರೂ, ಈ ಮಧ್ಯೆಯೇ ಚಿತ್ರದುರ್ಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆ ಮತ್ತು ನೀರಾವರಿ ಆಶ್ರಿತವಾಗಿ ರೈತರು ಈರುಳ್ಳಿ ಬೆಳೆದಿದ್ದಾರೆ. ಎಕರೆಗೆ 80ರಿಂದ 90 ಪ್ಯಾಕೆಟ್ ಈರುಳ್ಳಿ ಇಳುವರಿ ಬಂದಿದೆ.
ರಾಜ್ಯದಲ್ಲಿ ಬೆಳೆಯುವ ಈರುಳ್ಳಿಯ ಬಹುತೇಕ ಬೆಳೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದು, ಇಲ್ಲಿ ಕೇಳುವವರೂ ಇಲ್ಲದ ದುಸ್ಥಿತಿಯಿದೆ. ಕಳೆದ ಬಾರಿ ಕ್ವಿಂಟಾಲ್ ಈರುಳ್ಳಿಗೆ 4 ಸಾವಿರದಿಂದ 5 ಸಾವಿರ ರೂಪಾಯಿ ವರೆಗೆ ಮಾರಾಟ ಆಗಿತ್ತು.
ಆದರೆ, ಇದೀಗ ಕ್ವಿಂಟಾಲ್ ಈರುಳ್ಳಿ ಕೇವಲ 200ರಿಂದ 300 ರೂ.ಗಳಿಗೆ ಕುಸಿದಿದ್ದು, ರೈತರನ್ನು ಕಂಗೆಡಿಸಿದೆ. ದುಬಾರಿ ಬೀಜ, ರಸಗೊಬ್ಬರ, ವಿದ್ಯುತ್ ಕಣ್ಣಾಮುಚ್ಚಾಲೆಗಳ ಮಧ್ಯೆ ಸಾಲ ಮಾಡಿ ಈರುಳ್ಳಿ ಬೆಳೆ ಬೆಳೆದ ರೈತರ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲವಾಗಿದೆ. ಹೀಗಾಗಿ ರೈತರ ಕೂಲಿಯ ಹಣವೂ ದೊರೆಯದ ಸ್ಥಿತಿಯಿದ್ದು, ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮುಂಗಾರು ವೈಫಲ್ಯದ ಮಧ್ಯೆ ಶ್ರಮಪಟ್ಟು ಬೆಳೆಸಿದ ಈರುಳ್ಳಿಯನ್ನು ಬಹುತೇಕ ರೈತರು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಹೊಲಗಳಲ್ಲಿಯೇ ಕೊಳೆಯಲು ಬಿಟ್ಟಿರುವ ಉದಾಹರಣೆಗಳಿವೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಿ ಖರೀದಿಗೆ ಕೇಂದ್ರ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.







