ಫಿಲಿಪ್ಪೀನ್ಸ್ ಅಮೆರಿಕದ ‘ಕಿರಿಯ ಕಂದು ಸಹೋದರ’ ಅಲ್ಲ: ವಿದೇಶ ಸಚಿವ
ವಾಶಿಂಗ್ಟನ್, ಸೆ. 16: ಅಮೆರಿಕದೊಂದಿಗಿನ ಮೈತ್ರಿಗೆ ಫಿಲಿಪ್ಪೀನ್ಸ್ ಬದ್ಧವಾಗಿದೆ, ಆದರೆ ಮಾನವಹಕ್ಕುಗಳ ಬಗ್ಗೆ ಅಮೆರಿಕ ನೀಡುವ ಉಪನ್ಯಾಸವನ್ನು ಅದು ಕೇಳುವುದಿಲ್ಲ ಹಾಗೂ ‘ಕಿರಿಯ ಕಂದು ಸಹೋದರ’ ಎಂಬುದಾಗಿ ಕರೆಯಲ್ಪಡುವುದನ್ನು ಸಹಿಸುವುದಿಲ್ಲ ಎಂದು ಫಿಲಿಪ್ಪೀನ್ಸ್‌ನ ವಿದೇಶ ಸಚಿವ ಪರ್ಫೆಕ್ಟೊ ಯಸಯ್ ಗುರುವಾರ ಹೇಳಿದ್ದಾರೆ. ಫಿಲಿಪ್ಪೀನ್ಸ್‌ನಲ್ಲಿನ ಅಮೆರಿಕದ ವಸಾಹತು ಆಳ್ವಿಕೆಯ ವೇಳೆ, ಅಮೆರಿಕನ್ನರು ಫಿಲಿಪ್ಪೀನ್ಸ್ ಜನರನ್ನು ‘‘ಲಿಟಲ್ ಬ್ರೌನ್ ಬ್ರದರ್ಸ್’’ ಎಂಬುದಾಗಿ ಕರೆಯುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಫಿಲಿಪ್ಪೀನ್ಸ್‌ನ ನಿಷ್ಠುರ ಮಾತುಗಳ ನೂತನ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಇತ್ತೀಚೆಗೆ ನೀಡಿರುವ ಹೇಳಿಕೆಗಳ ಬಗ್ಗೆ ವಾಶಿಂಗ್ಟನ್‌ನಲ್ಲಿ ಮಾತನಾಡಿದ ಯಸಯ್, ಡುಟರ್ಟ್‌ರ ಕೆಲವು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಭಿಪ್ರಾಯಪಟ್ಟರು. ಡುಟರ್ಟ್ ಹೇಳಿರುವ ಮಾತುಗಳು ಫಿಲಿಪ್ಪೀನ್ಸ್‌ನ ಪ್ರಮುಖ ಮಿತ್ರ ದೇಶ ಅಮೆರಿಕದ ಜೊತೆಗಿನ ಬಾಂಧವ್ಯವನ್ನು ಹದಗೆಡಿಸಿದ್ದವು ಎಂಬುದನ್ನು ಸ್ಮರಿಸಬಹುದಾಗಿದೆ. ಅಮೆರಿಕದ ವಿಶೇಷ ಪಡೆಗಳು ದಕ್ಷಿಣ ಫಿಲಿಪ್ಪೀನ್ಸ್‌ನಿಂದ ವಾಪಸ್ ಹೋಗಬೇಕು ಎಂಬುದಾಗಿ ತಾನು ನೀಡಿರುವ ಕರೆ, ಅಮೆರಿಕನ್ ಸೈನಿಕರ ಸುರಕ್ಷತೆಗಾಗಿ ತೆಗೆದುಕೊಳ್ಳಲು ಉದ್ದೇಶಿಸಿರುವ ತಾತ್ಕಾಲಿಕ ಕ್ರಮವಷ್ಟೆ ಎಂಬುದಾಗಿ ಡುಟರ್ಟ್ ವಿವರಿಸಿದ್ದಾರೆ ಎಂದು ಫಿಲಿಪ್ಪೀನ್ಸ್ ವಿದೇಶ ಸಚಿವರು ಹೇಳಿದರು. ಅಬು ಸಯ್ಯಫ್ ಬಂಡುಕೋರರ ವಿರುದ್ಧ ಫಿಲಿಪ್ಪೀನ್ಸ್ ಪಡೆಗಳು ಆಕ್ರಮಣ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಸೈನಿಕರ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದರು.





