ಪಾಕ್ ಒಪ್ಪಂದದಲ್ಲಿ ಭಾರತ ಸೇರ್ಪಡೆ: ಅಫ್ಘಾನ್ ನಿಲುವಿಗೆ ಅಮೆರಿಕ ಬೆಂಬಲ
ವಾಶಿಂಗ್ಟನ್, ಸೆ. 16: ಪಾಕಿಸ್ತಾನದ ಮೂಲಕ ನಡೆಯುವ ವ್ಯಾಪಾರ ಒಪ್ಪಂದ (ಟ್ರಾನ್ಸಿಟ್ ಟ್ರೇಡ್ ಅಗ್ರಿಮೆಂಟ್)ದಲ್ಲಿ ಭಾರತವನ್ನೂ ಸೇರಿಸಿಕೊಳ್ಳುವಂತೆ ಪಾಕಿಸ್ತಾನವನ್ನು ಒತ್ತಾಯಿಸುವ ಅಫ್ಘಾನಿಸ್ತಾನದ ನಿಲುವನ್ನು ತಾನು ಬೆಂಬಲಿಸುವುದಾಗಿ ಅಮೆರಿಕ ಹೇಳಿದೆ.
‘‘ವಲಯದೊಳಗಿನ ಬಲವಾದ ವ್ಯಾಪಾರ ಸಂಬಂಧಗಳನ್ನು ನಾವು ಬೆಂಬಲಿಸುತ್ತೇವೆ. ಇದು ನಮ್ಮ ಆದ್ಯತೆ ಎಂಬುದಾಗಿ ನಾವು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ, ಸಹಕಾರ ಮನೋಭಾವದಿಂದ ರಚನಾತ್ಮಕವಾಗಿ ಜೊತೆಗೂಡಿ ಕೆಲಸ ಮಾಡುವುದು ಎಲ್ಲ ದೇಶಗಳ ಆದ್ಯತೆಯಾಗಬೇಕು. ವ್ಯಾಪಾರ ಒಪ್ಪಂದ ಅದರ ಒಂದು ಭಾಗವಾಗಿದೆ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ಮಾರ್ಕ್ ಸಿ. ಟೋನರ್ ಹೇಳಿದರು.ತಾನು ಪಾಕಿಸ್ತಾನದೊಂದಿಗೆ ಹೊಂದಿರುವ ‘ಹಾದುಹೋಗುವ ವ್ಯಾಪಾರ ಒಪ್ಪಂದ’ದಲ್ಲಿ ಭಾರತವನ್ನೂ ಸೇರಿಸಿಕೊಳ್ಳುವಂತೆ ಪಾಕಿಸ್ತಾನನ್ನು ಒತ್ತಾಯಿಸುವ ಅಫ್ಘಾನಿಸ್ತಾನದ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾನು ಈಗಾಗಲೇ ಹೇಳಿರುವಂತೆ, ವಲಯದ ಎಲ್ಲ ದೇಶಗಳ ನಡುವಿನ ಪ್ರಬಲ ವ್ಯಾಪಾರ ಸಂಬಂಧಗಳ್ನು ನಾವು ಬೆಂಬಲಿಸುತ್ತೇವೆ’’ ಎಂದರು.





