ರಫೇಲ್ ಖರೀದಿ ಒಪ್ಪಂದ ಅಂತಿಮದತ್ತ
ಹೊಸದಿಲ್ಲಿ, ಸೆ.16: ಭಾರತೀಯ ವಾಯು ಸೇನೆಯು(ಐಎಎಫ್) ಸುಖೋಯ್-30 ಯುದ್ಧ ವಿಮಾನಗಳನ್ನು ಖರೀದಿಸಿದ ಸುಮಾರು 20 ವರ್ಷಗಳ ಬಳಿಕ, ಇದೀಗ ರಕ್ಷಣಾ ಸಚಿವಾಲಯವು 36 ಡಸಾಲ್ಟ್ ರಫೇಲ್ ಯುದ್ಧ ವಿಮಾನಗಳ ಖರೀದಿಯ ಒಪ್ಪಂದವನ್ನು ಅಂತಿಮಗೊಳಿಸುವತ್ತ ಸಾಗಿದೆ.
1997ರಲ್ಲಿ ಭಾರತವು ರಶ್ಯದಿಂದ ಸು-30 ಎಂಕೆ ವಿಮಾನವನ್ನು ಒಪ್ಪಂದ ಮಾಡಿಕೊಂಡಿದೆ. 50 ಯುದ್ಧ ವಿಮಾನಗಳಿಗಾಗಿ ಭಾರತವು ರಶ್ಯದೊಂದಿಗೆ 1.4 ಶತಕೋಟಿ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿದ್ದರೆ, 36 ರಫೇಲ್ ಯುದ್ಧ ವಿಮಾನಗಳ ಹಾಲಿ ಬೆಲೆ 8.5 ಶತಕೋಟಿ ಡಾಲರ್‌ಗಳಾಗಿವೆ.
50 ಸುಖೋಯ್-30 ಎಂಕೆಐ ವಿಮಾನಗಳನ್ನು 5 ಹಂತಗಳಲ್ಲಿ ಉತ್ಪಾದಿಸಲಾಗುವುದು. ಮೊದಲ 8 ಸು-30ಎಂಕೆ ವಿಮಾನಗಳಿರುತ್ತವೆ. ಇದು ವಿಮಾನದ ಮೂಲ ಮಾದರಿಯಾಗಿದೆ. ಮುಂದಿನ ಹಂತದ 10 ಸು-ಎಂಕೆಗಳು ಫ್ರೆಂಚ್ ಹಾಗೂ ಇಸ್ರೇಲಿ ಹಾರಾಟ ತಂತ್ರಜ್ಞಾನದಿಂದ ಕೂಡಿರುತ್ತವೆ. ಮೂರನೆ ಹಂತವು ಸು-30 ಎಂಕೆಐಗಳ ಮೊದಲ ಕಂತಾಗಲಿದೆ. ನಾಲ್ಕನೆ ಹಂತದಲ್ಲಿ 12 ಎಂಕೆಐ ವಿಮಾನಗಳು ಹಾಗೂ ಅಂತಿಮ ಹಂತದಲ್ಲಿ ಎಎಲ್-31 ಎಫ್‌ಬಿ ಟರ್ಬೊ ಫ್ಯಾನ್‌ಗಳಿರುವ 10 ಸು-30 ಎಂಕೆಐಗಳನ್ನು ನಿರ್ಮಿಸಲಾಗುವುದು. ಮೊದಲ ಸು-30 ಎಂಕೆ 1997ರಲ್ಲಿ ಹಾಗೂ ಮೇಲ್ದರ್ಜೆಗೇರಿಸಿದ ಸು-30 ಎಂಕೆಐ 2000ನೆ ಇಸವಿಯಲ್ಲಿ ಬಾನಿಗೇರಿದ್ದವು. ಅದು ಅಂದಿನಿಂದ ಸೇವೆಯಲ್ಲಿದೆ. ಹೆಚ್ಚುವರಿ 42 ಸ್ಥಳೀಯವಾಗಿ ಜೋಡಿಸಲಾಗುವ ಸು-30 ಎಂಕೆಐಗಳಿಗಾಗಿ ಇನ್ನೊಂದು ಗುತ್ತಿಗೆಗೆ ಎಚ್‌ಎಎಲ್ 2012ರ ಡಿಸೆಂಬರ್‌ನಲ್ಲಿ ಸಹಿ ಹಾಕಿತ್ತು.







