ರಾಜ್ಯದ ಕ್ರೀಡಾಂಗಣಗಳ ಕಾಮಗಾರಿ ಪರಿಶೀಲನೆಗೆ ತಜ್ಞರ ತಂಡ ರಚನೆ: ಸಚಿವ ಪ್ರಮೋದ್
ಮಂಗಳೂರು ವಿವಿ ಅಂತರಕಾಲೇಜು ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ಗೆ ಚಾಲನೆ

ಉಡುಪಿ, ಸೆ.17: ರಾಜ್ಯದ ಎಲ್ಲ ಕ್ರೀಡಾಂಗಣಗಳಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜುಗಳ ಪ್ರೊಫೆಸರ್‌ಗಳು ಮತ್ತು ನಿವೃತ್ತ ಹಿರಿಯ ಸರಕಾರಿ ಇಂಜಿನಿಯರ್‌ಗಳನ್ನೊಳಗೊಂಡ ಐದು ಮಂದಿಯ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ರಾಜ್ಯ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ, ಮಂಗಳೂರು ವಿಶ್ವವಿದ್ಯಾಲಯದ ಅಂತರಕಾಲೇಜು ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಹಲವು ಕ್ರೀಡಾಂಗಣಗಳಲ್ಲಿ ನಡೆದಿರುವ ಕಾಮಗಾರಿಯ ಮೊತ್ತವು ಅಂತಾರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ನಡೆದಿರುವ ಕಾಮಗಾರಿಗಿಂತಲೂ ಹೆಚ್ಚಿನ ವೆಚ್ಚವಾಗಿರುವುದು ಕಂಡು ಬಂದಿದೆ.ಇದರಿಂದ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ವೆಚ್ಚ ಹೆಚ್ಚಳವಾಗಿ ಗುಣಮಟ್ಟದ ಕೊರತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶದಿಂದ, ಸಮಿತಿಯ ರಚನೆ ಮಾಡಲಾಗುತ್ತಿದೆ. ಈ ಸಮಿತಿಯು ರಾಜ್ಯದ ಎಲ್ಲಾ ಕ್ರೀಡಾಂಗಣಗಳಿಗೆ ಭೇಟಿ, ಕಾಮಗಾರಿಗೆ ಬಿಡುಗಡೆ ಆಗಿರುವ ಮೊತ್ತ, ಕಾಮಗಾರಿ ನಡೆದಿರುವ ವಿವರ, ಗುಣಮಟ್ಟದ ಕುರಿತು ಪರಿಶೀಲನೆ ವರದಿ ನೀಡಲಿದ್ದು, ಆ ವರದಿಯ ಪರಿಶೀಲನೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದ ಯುವ ನೀತಿ ರಚನೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಕ್ರೀಡಾಪಟುಗಳು, ದೃಹಿಕ ಶಿಕ್ಷಕರು ಮತ್ತು ಕ್ರೀಡಾ ಆಸಕ್ತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನಿರ್ದರಿಸಿದ್ದು, ಇದಕ್ಕಾಗಿ ರಾಜ್ಯದ ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಉಡುಪಿಯಲ್ಲಿ ಸಭೆೆ ನಡೆಸಲು ನಿರ್ಧರಿಸಲಾಗಿದ್ದು, ಉಡುಪಿಯಲ್ಲಿ ಸೆಪ್ಟಂಬರ್ 27ರಂದು ಪುರಭವನದಲ್ಲಿ ಸಭೆೆ ಆಯೋಜಿಸಿದ್ದು, ಉಡುಪಿ, ದ.ಕ. ಮತ್ತು ಚಿಕ್ಕಮಗಳೂರು ವ್ಯಾಪ್ತಿಯ ಎಲ್ಲಾ ಕ್ರೀಡಾಪಟುಗಳು, ದೃಹಿಕ ಶಿಕ್ಷಕರು ಮತ್ತು ಕ್ರೀಡಾಸಕ್ತರು ತಮ್ಮ ಅಭಿಪ್ರಯ ವ್ಯಕ್ತಪಡಿಸಬಹುದು. ಕ್ರೀಡಾನೀತಿಯಲ್ಲಿ ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ತೋರಲು ಅಗತ್ಯವಿರುವ ಅಂಶಗಳನ್ನು ಸೇರಿಸಲಾಗುವುದು ಎಂದು ಸಚಿವರು ಹೇಳಿದರು.
ಉಡುಪಿಯ ಒಳಾಂಗಣ ಕ್ರೀಡಾಂಗಣದಲ್ಲಿ 98 ಲಕ್ಷ ರೂ. ವೆಚ್ಚದಲ್ಲಿ ಹವಾನಿಯಂತ್ರಣ ವ್ಯವಸ್ಥೆ(ಎಸಿ) ಅಳಡಿಸಲು ಮತ್ತು ಬ್ಯಾಡ್ಮಿಂಟನ್ ಕೋರ್ಟ್‌ಗಳಿಗೆ ಸಿಂಥೆಟಿಕ್ ಮ್ಯಾಟ್ ಅಳವಡಿಸಲು 31 ಲಕ್ಷ ರೂ.ನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಯುವ ಕ್ರೀಡಾ ಮಿತ್ರ ಯೋಜನೆಯಡಿ ಮತ್ತು ಗ್ರಾಮೀಣ ಕ್ರೀಡೋತ್ಸವ ಯೋಜನೆಯಡಿ ವಿವಿಧ ಸಂಘಗಳಿಗೆ ಅನುದಾನದ ಚೆಕ್‌ನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ, ದ.ಕ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಂಗಳೂರು ವಿವಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು.
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ರಾವ್ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ವಂದಿಸಿದರು.
ನಂತರ ಸಚಿವರು ಜಿಲ್ಲಾ ಈಜುಕೊಳದ ಪರಿಶೀಲನೆ ನಡೆಸಿದರು.





