ವಿಶೇಷ ಮಕ್ಕಳ ರಾಜ್ಯಮಟ್ಟದ ಚಾಂಪಿಯನ್‌ಶಿಪ್-2016 ಉದ್ಘಾಟನೆ
ವಿಶೇಷ ಒಲಿಂಪಿಕ್ಸ್‌ಗೆ ಭಾಗವಹಿಸುವ ರಾಷ್ಟ್ರೀಯ ತಂಡಕ್ಕೆ ಆಯ್ಕೆ

ಮಂಗಳೂರು, ಸೆ.17: ವಿಶೇಷ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಮಟ್ಟಕ್ಕೆ ಕ್ರೀಡಾಳುಗಳ ಆಯ್ಕೆಗಾಗಿ ನಗರದ ಮಂಗಳಾ ಕ್ರೀಡಾಂಗಣದಲ್ಲಿಂದು ಆಯೋಜಿಸಲಾಗಿರುವ ರಾಜ್ಯಮಟ್ಟದ ಚಾಂಪಿಯನ್‌ಶಿಪ್-2016ನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.
ವಿಶೇಷ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಸರಕಾರದಿಂದ ಇಂತಹ ಕ್ರೀಡಾಕೂಟಗಳಿಗೆ ಧನಸಹಾಯ ಸಿಗದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕ್ರೀಡಾಳು ಕೃಷ್ಣ ರಾಜ್ ಶೆಟ್ಟಿ ಅವರಿಂದ ಧ್ವಜ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಭಿನ್ನ ಸಾಮರ್ಥ್ಯದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕಾರ್ಯ ಆಗಬೇಕಾಗಿದೆ. ಕ್ರೀಡೆಯಲ್ಲಿ ಗೆದ್ದು ಬರುವ ವಿಶೇಷ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ಜೊತೆ ಹೆಚ್ಚಿನ ಪ್ರೋತ್ಸಾಹದ ಅಗತ್ಯ ವಿದೆ ಎಂದರು.
ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ 8 ಜಿಲ್ಲೆಗಳ ವಿಶೇಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 24 ಕ್ರೀಡಾಳುಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.
ವಿನಾಯಕ ವಿ. ಕಾಂಬ್ಳಿ ಪ್ರತಿಜ್ಣಾ ವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರದೀಪ್ ಡಿಸೋಜ, ಸುಂದರ ಪೂಜಾರಿ, ಜಯವಿಠಲ, ಮಹಾಬಲ ಮಾರ್ಲ ,ಜಗದೀಶ್, ಮಹೇಶ್‌ಕುಮಾರ್, ಮಾಧವ ಸುವರ್ಣ, ಆ್ಯಗ್ನೆಸ್ ಕುಂದರ್, ಸಮೀವುಲ್ಲಾ, ಮುಹಮ್ಮದ್ ಕುಂಞಿ, ಪ್ರಶಾಂತ ಪೈ, ಉಮೇಶ್ ಉಪಸ್ಥಿತರಿದ್ದರು.
ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಧಾಕೃಷ್ಣ ವಂದಿಸಿದರು.





