"ಕ್ಯಾಂಪ್ಕೊ ರೈತರ ಬದಲು ವ್ಯಾಪಾರಿಗಳ ಹಿತ ಕಾಯುತ್ತಿದೆ"
ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಆರೋಪ

ಪುತ್ತೂರು, ಸೆ.17: ರೈತರ ಹಿತ ಕಾಪಾಡುವ ಉದ್ದೇಶದಿಂದ ಸ್ಥಾಪನೆಗೊಂಡ ಕ್ಯಾಂಪ್ಕೊ ಸಂಸ್ಥೆಯು ರೈತರೊಂದಿಗೆ ಇರುವ ಬದಲು ವ್ಯಾಪಾರಸ್ಥರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ ಉಮಾನಾಥ ಶೆಟ್ಟಿ ಆರೋಪಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಿಕೆ ಬೆಲೆಯ ಗೊಂದಲದಿಂದಾಗಿ ಸಣ್ಣ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕಾಗಿದ್ದ ಕ್ಯಾಂಪ್ಕೊ ಹಾಗೂ ಎಪಿಎಂಸಿ ವ್ಯಾಪಾರಿಗಳೊಂದಿಗಿದ್ದು ರೈತರಿಗೆ ಅನ್ಯಾಯ ಎಸಗುತ್ತಿದೆ. ಕ್ಯಾಂಪ್ಕೊ ದ್ವಂದ್ವತೆಯಲ್ಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೆಸರಿನಲ್ಲಿ ಆಡಳಿತಕ್ಕೆ ಬಂದಿರುವ ಕೇಂದ್ರದ ಮೋದಿ ಸರಕಾರ ಇದೀಗ ರೈತ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ರೈತರ ಪರವಾಗಿ ನಿಲ್ಲುವುದು ಇದೀಗ ಅನಿವಾರ್ಯವಾಗಿದೆ ಎಂದ ಉಮಾನಾಥ ಶೆಟ್ಟಿ, ರೈತರು ಸಂಘಟನೆಯಾಗದಿದ್ದಲ್ಲಿ ಸರಕಾರ ಎಚ್ಚರವಾಗುವುದಿಲ್ಲ ಎಂದರು. ಕೃಷಿ ಉತ್ಪನ್ನಗಳಿಗೆ ಸಮರ್ಪಕ ದರ ಸಿಗುವಂತಾಗಲು ಮಂಡಳಿ ಸ್ಥಾಪನೆಗೆ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಘಟಕ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಇದೀಗ ಅಂತಿಮ ಹಂತದಲ್ಲಿದೆ. ಸೆ.29ರಂದು ಬೆಂಗಳೂರಿನಲ್ಲಿ ಸಂಘಟನೆಯ ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಅಧ್ಯಕ್ಷರ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಚಿಂತನೆ ನಡೆಯಲಿದೆ ಎಂದರು.
ಅಕ್ಟೋಬರ್ 8ರಂದು ಕಡಬದಲ್ಲಿ ರಬ್ಬರ್ ಬೆಳೆಗಾರರ ಸಭೆ
ಕಡಬ ಬ್ಲಾಕ್ ಘಟಕದ ಅಧ್ಯಕ್ಷ ಸೆಬಾಸ್ಟಿನ್ ಮಾತನಾಡಿ, ರಬ್ಬರ್ ಬೆಳೆಯು ಪಾತಾಳಕ್ಕೆ ಇಳಿದಿದ್ದು, ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ. ರಬ್ಬರ್ ಉತ್ಪನ್ನಗಳಾದ ಟಯರ್ ಮತ್ತು ಕಚ್ಛಾ ಸಂಗ್ರಹ ಸಲಕರಣೆಗಳಿಗೆ ಬೆಲೆಯಿದೆ, ಆದರೆ ಕಚ್ಚಾ ಉತ್ಪನ್ನಗಳಿಗೆ ಮಾತ್ರ ಬೆಲೆ ಕುಸಿತಗೊಂಡಿದೆ. ಬೆಲೆ ಸ್ಥಿರೀಕರಣಕ್ಕಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 8ಂದು ಕಡಬದಲ್ಲಿ ರಬ್ಬರ್ ಬೆಳೆಗಾರರ ಸಭೆ ಕರೆದು ಚರ್ಚೆ ನಡೆಸಿ ಹೋರಾಟದ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದು ತಿಳಿಸಿದರು.







