ನೇಪಾಳದಲ್ಲಿ ಎಲ್ಲವಿಭಾಗಗಳನ್ನು ಒಳಗೊಂಡ ಸಂವಿಧಾನ ಜಾರಿಗೆ ಬರಬೇಕಾಗಿದೆ: ಭಾರತ

ಹೊಸದಿಲ್ಲಿ, ಸೆ. 17: ದೇಶದ ಎಲ್ಲ ವಿಭಾಗಗಳ ಜನರ ಅಭಿಲಾಷೆಗಳನ್ನು ಒಳಗೊಂಡ ಸಂವಿಧಾನ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ನೇಪಾಳವನ್ನು ಭಾರತ ವಿನಂತಿಸಿದೆ. ನಾಲ್ಕು ದಿನಗಳ ಸಂದರ್ಶನಕ್ಕೆ ಹೊಸದಿಲ್ಲಿಗೆ ಬಂದಿರುವ ನೇಪಾಳದ ಹೊಸ ಪ್ರಧಾನಿ ಪುಷ್ಪ ಕಮಲ್ ದಹಾಲ್ ಎಂಬ ಪ್ರಚಂಡರನ್ನು ಭೇಟಿಯಾದ ಬಳಿಕ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅತ್ಯಂತ ಹತ್ತಿರದ ನೆರೆದೇಶ ಎಂಬನೆಲೆಯಲ್ಲಿ ಸೌಹಾರ್ದ ರಾಷ್ಟ್ರ ಎಂಬ ನೆಲೆಯಲ್ಲಿಯೂ ನೇಪಾಳದ ಶಾಂತಿ, ಸುಸ್ಥಿರತೆ, ಆರ್ಥಿಕ ಪ್ರಗತಿ ಪರಸ್ಪರ ಗುರಿಯಾಗಿದೆ. ನೇಪಾಲದ ಪ್ರಗತಿಯ ಪ್ರತಿ ಹೆಜ್ಜೆಯಲ್ಲಿಯೂ ಅವರಜೊತೆ ನಿಲ್ಲಲು ಭಾರತಕ್ಕೆ ಹೆಮ್ಮೆಯಿದೆ. ಪ್ರಚಂಡರ ನೇತೃತ್ವದ ಅಡಿಯಲ್ಲಿ ಎಲ್ಲ ವಿಭಾಗಗಳಿಗೂ ಅನ್ವಯವಾಗುವ ಸಂವಿಧಾನ ಜಾರಿಗೆ ತರಲು ಸಾಧ್ಯವಿದೆ ಎಂದು ತನಗೆ ವಿಶ್ವಾಸ ವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಉಭಯ ರಾಷ್ಟ್ರಗಳ ನಾಯಕರ ನಡುವಿನ ಭೇಟಿಯ ವೇಳೆ ವಿವಿಧ ವಿಷಯಗಳಲ್ಲಿ ಸಹಮತಕ್ಕೆ ಬರಲಾಗಿದ್ದು, ನೇಪಾಳಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸುವ ಭರವಸೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ವರದಿ ತಿಳಿಸಿದೆ.





