ಈದ್ ಗೆ ಮನೆಗೆ ಬಂದವನು ಪುತ್ರಿಗೆ ಕಿರುಕುಳ ನೀಡಿದವರನ್ನು ಪ್ರತಿಭಟಿಸಿ ಪ್ರಾಣ ಕಳಕೊಂಡ
ಬಿಜ್ನೋರ್ ಹತ್ಯಾಕಾಂಡ

ಲಕ್ನೋ, ಸೆ. 17: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಒಂದೇ ಪರಿವಾರದ ಮೂವರು ಹತರಾಗಿ 12 ಮಂದಿ ಗಾಯಗೊಂಡಿದ್ದಾರೆ. ಅಪ್ರಾಪ್ತ ಬಾಲಕಿಯೊಬ್ಬಳಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದಾಗ ಅದನ್ನು ಪ್ರತಿಭಟಿಸಿದ ಆಕೆಯ ಮನೆಯವರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದಾಗ ಬಾಲಕಿಯ ತಂದೆಯ ಸಹಿತ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಹಸೀನುದ್ದೀನ್ , ಸರ್ಫಾರಾಜ್ಹ್ ಹಾಗು ಎಹ್ಸಾನ್ ಎಂದು ಗುರುತಿಸಲಾಗಿದೆ.
ಕಿರುಕುಳ ಪ್ರಕರಣ ನಡೆದಾಗ ಬಾಲಕಿಯ ಮನೆಯವರು ಹಾಗು ಈ ಯುವಕರ ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ಇದನ್ನು ಊರವರು ತಡೆದು ನಿಲ್ಲಿಸಿದ್ದರು. ಆದರೆ ರಾತ್ರಿ 8:30 ರ ಸುಮಾರಿಗೆ ಜಾಟ್ ಸಮುದಾಯದ ಸುಮಾರು 100 ಮಂದಿ ಆ ಬಾಲಕಿಯ ಮನೆಯನ್ನು ಸುತ್ತುವರಿದು ಗುಂಡು ಹಾರಿಸಿದ್ದಾರೆ. ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಮೂವರು ಪೊಲೀಸರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತು ಮಾಡಲಾಗಿದೆ. ಈ ಮೂವರು ಪೊಲೀಸರು ಗುಂಡು ಹಾರಾಟ ನಡೆಯುವಾಗ ಅಲ್ಲೇ ಉಪಸ್ಥಿತರಿದ್ದರು.
ಮೃತ ಹಸೀನುದ್ದೀನ್ ಅವರ ಪುತ್ರ ತಾಲಿಬ್ ಖಾನ್ ಪ್ರಕಾರ ಆತ ತನ್ನ ತಂದೆಯ ಸೋದರನ ಮಗಳನ್ನು ಶಾಲೆಗೇ ಕರೆದುಕೊಂಡು ಹೋಗುತ್ತಿರುವಾಗ ಕೆಲವರು ಆಕೆಯ ಬಗ್ಗೆ ಅಸಭ್ಯ ಕಮೆಂಟ್ ಮಾಡಿದರು. ತಾಲಿಬ್ ಅದನ್ನು ನಿರ್ಲಕ್ಷಿಸಿ ಮುಂದೆ ಹೋದರೂ, ಆತನ ಚಿಕ್ಕಪ್ಪ ( ಎಹ್ಸಾನ್ ) ವಿಷಯ ಕೇಳಿ ಅಲ್ಲಿಗೆ ಬಂದರು. ತಾಲಿಬ್ ಅಲ್ಲಿಗೆ ಮರಳಿ ಬಂದಾಗ ಆತನ ಚಿಕ್ಕಪ್ಪ ಹಾಗು ಆ ಯುವಕರ ನಡುವೆ ಜಗಳ ಆಗುತ್ತಿತ್ತು. ಮೃತ ಹಸೀನುದ್ದೀನ್ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು. ಎಹ್ಸಾನ್ ದಿಲ್ಲಿಯಲ್ಲಿ ಕೆಲಸದಲ್ಲಿದ್ದು ಈದ್ ಆಚರಿಸಲು ಮನೆಗೆ ಬಂದಿದ್ದರು. ಸರ್ಫಾರಾಜ್ಹ್ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ.







