ವಿವಿ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಪ್ರಕರಣ : ತನಿಖೆಯ ಹೊಣೆ ಸಿಐಡಿಗೆ ವಹಿಸಲು ನ್ಯಾಷನಲ್ ವುಮೆನ್ಸ್ ಫ್ರಂಟ್ ಆಗ್ರಹ

ಮಂಗಳೂರು, ಸೆ. 17: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಸಾಯನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ರೆಕಾರ್ಡಿಂಗ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸುವ ಮೂಲಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್‌ಡಬ್ಲಎಫ್) ಜಿಲ್ಲಾ ಘಟಕ ಆಗ್ರಹಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ಆರೋಪಿ ವಿದ್ಯಾರ್ಥಿ ಸಂತೋಷ್ ಎಂಬಾತನ ವಿರುದ್ಧ ಪೊಲೀಸರು ದುರ್ಬಲ ಪ್ರಕರಣ ದಾಖಲಿಸಿರುವುದರಿಂದ ಒಂದೇ ದಿನದಲ್ಲಿ ಆತ ಜಾಮೀನು ಪಡೆಯಲು ಸಾಧ್ಯವಾಗಿದೆ ಎಂದು ಆರೋಪಿಸಿ ಎನ್‌ಡಬ್ಲುಎಫ್‌ನ ಪ್ರತಿನಿಧಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಫೆಡರೇಶನ್ ಆಫ್ ವುಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ, ಮಹಿಳೆಯರ ಖಾಸಗಿತನವನ್ನು ಅವಮಾನಿಸುವ ಕೃತ್ಯವೆಸಗಿದ ಆರೋಪಿಗೆ ಒಂದೇ ದಿನದಲ್ಲಿ ಜಾಮೀನು ಸಿಗುವಂತಹ ಪ್ರಕರಣದಿಂದ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಎಸಗಲಾಗಿದೆ,. ಮಾತ್ರವಲ್ಲದೆ, ಕಾನೂನಿನ ದುರ್ಬಲತೆಯ ಬಗ್ಗೆ ಇಡೀ ದೇಶಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗಿದೆ ಎಂದು ಹೇಳಿದರು.
ಆರೋಪಿ ವಿದ್ಯಾರ್ಥಿಗಳ ಜತೆ ಸವಾಲಿಗಾಗಿ ಈ ಕೃತ್ಯ ಎಸಗಿದ್ದ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿರುವ ಸಾಧ್ಯತೆ ಇದೆ. ಮಾತ್ರವಲ್ಲದೆ, ಇಂತಹ ದುಷ್ಕೃತ್ಯ ಈ ಹಿಂದೆಯೂ ನಡೆದಿದೆಯೇ? ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳು ಹೊರಗೆ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡಿರಬಹುದೇ? ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪೊಲೀಸ್ ಇಲಾಖೆ ಅಥವಾ ವಿಶ್ವವಿದ್ಯಾನಿಲಯದಿಂದ ನೀಡಲಾಗಿಲ್ಲ. ಇದರಿಂದಾಗಿ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರ ಪೋಷಕರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಅವರು ವಿಷಾದಿಸಿದರು.
ನ್ಯಾಷನಲ್ ವುಮೆನ್ಸ್ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಶಾಹಿದಾ ಯೂಸುಫ್ ಮಾತನಾಡಿ, ದಲಿತ, ಅಲ್ಪಸಂಖ್ಯಾತ, ಆದಿವಾಸಿ, ಹಿಂದುಳಿದ ವರ್ಗಗಳ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಕೇಂದ್ರಗಳಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಾಗಿರುವುದು ವಿಷಾದನೀಯ ಎಂದರು.
ದುರ್ಬಲ ಕಾನೂನುಗಳಿಂದಾಗಿ ಘೋರ ಅಪರಾಧದ ಹೊರತಾಗಿಯೂ ಆರೋಪಿಗೆ ತಕ್ಷಣ ಜಾಮೀನು ಬಿಡುಗಡೆಯ ಮೂಲಕ ಮತ್ತಷ್ಟು ಅಪರಾಧಗಳನ್ನು ಎಸಗಲು ಪ್ರಚೋದಿಸಿದಂತಾಗುತ್ತದೆ. ಆದ್ದರಿಂದ ಕಾನೂನನ್ನು ತಿದ್ದುಪಡಿ ಮಾಡುವ ಅಗತ್ಯವಿದೆ. ಅದರಿಂದ ಆರೋಪಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಸಮಾಜದಲ್ಲಿ ಎಚ್ಚರಿಕೆಯ ಸಂದೇಶ ನೀಡಲು ಸಾಧ್ಯವಾಗಬೇಕಿದೆ ಎಂದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
►ಪ್ರಕರಣಕ್ಕೆ ಸಂಬಂಧಿಸಿ ವಿಶ್ವವಿದ್ಯಾನಿಲಯ ತಕ್ಷಣ ಮಹಿಳಾ ದೌರ್ಜನ್ಯದಡಿ ಪ್ರಕರಣ ಆರೋಪಿಯ ಮೇಲೆ ಪ್ರಕರಣ ದಾಖಲಿಸಬೇಕು.
►ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು.
► ಆರೋಪಿಯನ್ನು ತಕ್ಷಣ ವಿಶ್ವವಿದ್ಯಾನಿಲಯದಿಂದ ವಜಾಗೊಳಿಸಬೇಕು.
ಪ್ರತಿಭಟನೆಯಲ್ಲಿ ಎನ್‌ಡಬ್ಲುಎಫ್‌ನ ರಾಜ್ಯ ಸದಸ್ಯೆ ಫರ್‌ರಾನಾ ಮುಹಮ್ಮದ್ ಮಾತನಾಡಿದರು.







