ಕಾವೇರಿ ಜಲವಿವಾದ; ಪ್ರಧಾನಿ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ: ನಿರ್ಮಲಾ ಸೀತಾರಾಮನ್

ಬೆಂಗಳೂರು, ಸೆ.17: ಕಾವೇರಿ ನದಿ ನೀರು ಹಂಚಿಕೆ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಪ್ರಧಾನಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಅರುಣ ಚೇತನ ದಿವ್ಯಾಂಗ ಶಾಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣವನ್ನು ಮಧ್ಯಸ್ಥಿಕೆ ವಹಿಸಿ ಪರಿಹರಿಸುವಂತೆ ಅವರ ಮೇಲೆ ಒತ್ತಡ ಹೇರುವುದಾಗಲಿ, ಅವರ ವಿರುದ್ಧ ಆರೋಪ ಗಳನ್ನು ಮಾಡುವುದಾಗಲಿ ಸರಿಯಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ನಮ್ಮ ಸಂಪೂರ್ಣ ಸಹಮತವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಮಸ್ಯೆ ಇರುವುದು ಸತ್ಯ. ಆದರೆ, ವಾಸ್ತವಾಂಶವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಸುಪ್ರೀಕೋರ್ಟ್ ಎರಡು ರಾಜ್ಯಗಳಲ್ಲಿರುವ ವಸ್ತುಸ್ಥಿತಿಯನ್ನು ಆಧರಿಸಿಯೆ ಅಂತಿಮ ತೀರ್ಪು ನೀಡಲಿ ಎಂಬುದು ನನ್ನ ಹಾರೈಕೆ. ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ ಎಂಬ ಕಾರಣಕ್ಕೆ ಕಾವೇರಿ ನದಿ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದು ಅವರು ಹೇಳಿದರು.







