ಬೆಳ್ತಂಗಡಿ: ವಿಶ್ವಕರ್ಮ ಜಯಂತಿ ಕಾರ್ಯಕ್ರಮ

ಬೆಳ್ತಂಗಡಿ,ಸೆ.17: ವಿಶ್ವಕರ್ಮ ಸಮುದಾಯ ಶಿಲ್ಪಕಲೆಯ ಆರಾಧಕರು, ನಿರ್ಮಾತೃಗಳು ಶಿಲ್ಪಕಲೆಯನ್ನು ವಿಶ್ವಕ್ಕೆ ಪರಿಚಯಿಸಿದವರಾಗಿದ್ದಾರೆ ಎಂದು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ಭಟ್ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಆಡಳಿತದ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಲ್ಪಕಲೆಯನ್ನು ನಾವು ಆರಾಧಿಸಬೇಕು. ಅದನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನವೂ ಮಾಡಬೇಕಾಗಿದೆ. ರಾಜ್ಯ ಸರಕಾರ ಪ್ರಥಮ ಬಾರಿಗೆ ಸರ್ಕಾರಿ ಮಟ್ಟದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ ಎಂದರು. ವಿಶ್ವಕರ್ಮ ಜಯಂತಿಯ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಕಮಲಾಕ್ಷ ಆಚಾರ್ ಮಾತನಾಡಿ, ಸಮಸ್ತ ಜನಾಂಗಕ್ಕೆ ವಿಶ್ವಕರ್ಮನ ಕೊಡುಗೆ ಅನನ್ಯ. ರಾಮಾಯಣ, ಮಹಾಭಾರತ ಕಾಲದಲ್ಲಿ ವಿಶ್ವಕರ್ಮನ ಕೊಡುಗೆಗಳ ಉಲ್ಲೇಖವಿದೆ. ಅನಾದಿ ಕಾಲದಿಂದಲೂ ದೇವಾಲಯಗಳ ನಿರ್ಮಾಣ ಕಾಲದಲ್ಲಿ ಶಿಲ್ಪಕಲೆಗಳನ್ನು ನಿರ್ಮಿಸಿ ಶಿಲ್ಪಕಲೆಯ ಕೊಡುಗೆಯನ್ನು ನೀಡಿದವರು ವಿಶ್ವಕರ್ಮ ಸಮುದಾಯ. ಸಮಸ್ತ ಜನಾಂಗಕ್ಕೆ ಸಾಧನೋಪಕರಣವನ್ನು ಮಾಡಿಕೊಡುವವರೂ ಕೂಡ ಆಗಿದ್ದಾರೆ.ಕುಶಲಕರ್ಮಿಗಳಾದ ಈ ಸಮುದಾಯಕ್ಕೆ ಕಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಪಂಚ ಕಸುಬುಗಳಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಇದು ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು. ವೇದಿಕೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ವಿಶ್ವಕರ್ಮಾಭ್ಯುದಯ ಸಂಘದ ಅಧ್ಯಕ್ಷ ಸತೀಶ್ ಆಚಾರ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ ಉಪಸ್ಥಿತರಿದ್ದರು.
ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೆ ಸ್ವಾಮಿ ಸ್ವಾಗತಿಸಿ, ತಾಪಂ ಸಂಯೋಜಕ ಜಯಾಂದ ಕಾರ್ಯಕ್ರಮ ನಿರ್ವಹಿಸಿದರು.





