ಜಿಗ್ನೇಶ್ ಬಂಧನ ಖಂಡಿಸಿ ಪ್ರತಿಭಟನೆ : ನೂರಾರು ಕಾರ್ಯಕರ್ತರ ಬಂಧನ, ಬಿಡುಗಡೆ

ಬೆಂಗಳೂರು, ಸೆ.17: ಗುಜರಾತ್ ಭೇಟಿ ವೇಳೆ ದಲಿತ ಚಳವಳಿ ಮುಖಂಡ ಜಿಗ್ನೇಶ್ ಮೆವಾನಿಯನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ನಗರದ ಟೌನ್‌ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ದೆಹಲಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಜಂಟಿಯಾಗಿ ಸಂಘಟಿಸಿದ್ದ ದಲಿತ ಸ್ವಾಭಿಮಾನಿ ರ್ಯಾಲಿಯಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಗುಜರಾತ್‌ಗೆ ಎರಡು ದಿನಗಳ ಭೇಟಿ ಮಾಡುವ ಸಲುವಾಗಿ ಆಗಮಿಸಿದ್ದ ಮೆವಾನಿಯನ್ನು, ಮೋದಿಯ ಹುಟ್ಟುಹಬ್ಬದ ಪ್ರಯುಕ್ತ ಯಾವುದೆ ಪ್ರತಿಭಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಬಂಧಿಸಿ ಅಜ್ಞಾತ ಸ್ಥಳದಲ್ಲಿರಿಸಿಕೊಂಡಿದ್ದನ್ನು ನೋಡಿದರೆ ಮೋದಿಗೆ ಮೆವಾನಿಯನ್ನು ಕಂಡರೆ ಭಯವಾಗುತ್ತದೆ ಎಂದೆನಿಸುತ್ತಿದೆ ಎಂದು ಪ್ರತಿಭಟನಾಕಾರರು ಲೇವಡಿ ಮಾಡಿದರು.
ಉನಾ ಚಳವಳಿಯ ಒತ್ತಾಯಗಳನ್ನು ದೇಶದಾದ್ಯಂತ ಎಲ್ಲ ದಲಿತ, ಎಡ ಮತ್ತು ಪ್ರಜಾಸತ್ತಾತ್ಮಕ ಐಕ್ಯ ಚಳವಳಿಯನ್ನು ಸಂಘಟಿಸುವ ಉದ್ದೇಶದಿಂದ ನಡೆಸಿದ್ದ ಸ್ವಾಭಿಮಾನ ರ್ಯಾಲಿಯು ಮೋದಿಯ ನಿದ್ದೆ ಕೆಡಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಹತ್ತಿಕ್ಕುವ ದೃಷ್ಟಿಯಿಂದ ಜಿಗ್ನೇಶ್ ಅವರನ್ನು ಬಂಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಜಿಗ್ನೇಶ್ ಗುಜರಾತ್‌ನಲ್ಲಿ ಅ.1 ರಿಂದ ಸರಣಿ ಚಳವಳಿಗಳನ್ನು ನಡೆಸಲು ಮುಂದಾಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಗುಜರಾತ್‌ನ ಬಿಜೆಪಿ ಸರಕಾರ ಅವರನ್ನು ಬಂಧಿಸುವ ಮೂಲಕ ಚಳವಳಿಯ ಮುಂಚೂಣಿಯಲ್ಲಿರುವ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡಲು ಮುಂದಾಗಿದೆ. ಆದರೆ, ದಲಿತ ಸ್ವಾಭಿಮಾನಿ ಚಳವಳಿಗಾರರು ಇದಕ್ಕೆ ಬೆದರುವುದಿಲ್ಲ. ಅಷ್ಟೇ ಅಲ್ಲದೆ, ಐಕ್ಯತೆ ಮತ್ತು ದೃಢತೆಯಿಂದ ಚಳವಳಿಯನ್ನು ಮುನ್ನೆಡೆಸುತ್ತೇವೆ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಅಹಮದಾಬಾದಿನಲ್ಲಿ ನಕಲಿ ಗೋ ರಕ್ಷಕರು ಮಹಮ್ಮದ್ ಅಯ್ಯೂಬ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಗರದ ಬನ್ನೇರುಘಟ್ಟ ಪ್ರದೇಶದಲ್ಲಿ ಮುಸ್ಲಿಂ ಕುಟುಂಬವನ್ನು ಗೋಹತ್ಯೆಯ ನೆಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ದೇಶದಲ್ಲಿ ದಲಿತ, ಮುಸ್ಲಿಮರ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಅದಕ್ಕೆ ಪ್ರತಿರೋಧವಾಗಿ ದಲಿತ, ಮುಸ್ಲಿಂ ಐಕ್ಯ ಚಳವಳಿ ಬೆಳೆಯುತ್ತಿದ್ದು, ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಹಿಳಾ ಚಳವಳಿಯ ಮುಖಂಡರಾದ ವಿಮಲಾ ಹೇಳಿದರು.
ವಿದ್ಯಾರ್ಥಿ ಮುಖಂಡರಾದ ಗುರುರಾಜ್‌ದೇಸಾಯಿ, ಹನುಮಂತ್, ಮಹಿಳಾ ನಾಯಕಿಯರಾದ ಶಾರದಾ, ವಿಮಲಾ, ಸುನಂದಮ್ಮ, ಯುವಜನ ಸಂಘಟನೆ ಮುಖಂಡರಾದ ಶಿವು ಸೇರಿದಂತೆ ನೂರಾರು ಜನರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.







