ಇತಿಹಾಸ, ಪರಂಪರೆಯನ್ನು ಸ್ಮರಿಸುವ ಕೆಲಸ ಆಗಬೇಕು : ಅಂಗಾರ
ಸುಳ್ಯದಲ್ಲಿ ವಿಶ್ವಕರ್ಮ ಜಯಂತಿ

ಸುಳ್ಯ,ಸೆ.17: ತಾಲೂಕು ಆಡಳಿತ ಹಾಗೂ ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸೇವಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕ ಎಸ್.ಅಂಗಾರ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವಕರ್ಮ ಎಂದರೆ ಜ್ಞಾನ. ಜ್ಞಾನ ಸೃಷ್ಠಿಯ ಮೂಲದಿಂದ ಆಗಿದೆ. ಅದು ಎಲ್ಲರಿಗೂ ಇದೆ. ಆದರೆ ದುರಾಸೆಗಳು ಹೆಚ್ಚಾದಾಗ ಬುದ್ದಿ ಕಡಿಮೆಯಾಗಿದೆ. ಇತಿಹಾಸ, ಪರಂಪರೆಯನ್ನು ಮರೆಯುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ವಿಶ್ವಕರ್ಮ ದಿನಾಚರಣೆ ಆರಂಭಿಸಬೇಕಿತ್ತು. ಅಭಿಮಾನ ಇಲ್ಲದೆ ಯಾವುದೇ ಅಚರಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದವರು ಹೇಳಿದರು.
ಪುರೋಹಿತ ವಿಶ್ವೇಶ್ವರ ಬಾಳಿಲ ವಿಶೇಷ ಉಪನ್ಯಾಸ ನೀಡಿದರು. ವಿಶ್ವಕರ್ಮ ಭವನಕ್ಕೆ ಶಾಸಕರ ಅನುದಾನದಿಂದ 6 ಲಕ್ಷ ಮಂಜೂರು ಮಾಡಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಅಟ್ಲೂರು ವೇದಿಕೆಯಲ್ಲಿದ್ದರು. ತಹಶೀಲ್ದಾರ್ ಅನಂತಶಂಕರ ಸ್ವಾಗತಿಸಿ, ನಾರಾಯಣ ಆಚಾರ್ಯ ವಂದಿಸಿದರು. ಶಶಿಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.





