ಭಾಸ್ಕರ್ ಶೆಟ್ಟಿ ಕೊಲೆ: ನಿರಂಜನ್ ಭಟ್ ಮತ್ತೆ 2 ದಿನ ಸಿಐಡಿ ಕಸ್ಟಡಿಗೆ

ಉಡುಪಿ, ಸೆ.17: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್‌ನನ್ನು ಉಡುಪಿ ನ್ಯಾಯಾಲಯ ಮತ್ತೆ ಎರಡು ದಿನಗಳ ಕಾಲ ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.
ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಸಿಐಡಿ ಪೊಲೀಸರ ಮನವಿಯಂತೆ ಸೆ.15ರಂದು ನಿರಂಜನ್ ಭಟ್ ನನ್ನು ಎರಡು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ, ಸೆ.17ರಂದು ಸಂಜೆ ಹಾಜರು ಪಡಿಸುವಂತೆ ಆದೇಶ ನೀಡಿದ್ದರು.
ಅದರಂತೆ ಸಿಐಡಿ ಪೊಲೀಸರು ಆತನನ್ನು ಇಂದು ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆ ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್, ನಿರಂಜನ್ ಭಟ್‌ನನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಹಿರಿಯ ಸಹಾಯಕ ಸರಕಾರಿ ಅಭಿ ಯೋಜಕ ಪ್ರವೀಣ್ ಕುಮಾರ್ ಮೂಲಕನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಇದಕ್ಕೆ ಆರೋಪಿ ಪರ ವಕೀಲ ವೈ.ವಿಕ್ರಂ ಹೆಗ್ಡೆ ಆಕ್ಷೇಪ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶ ರಾಜೇಶ್ ಕರ್ಣಂ, ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸೆ.19ರಂದು ಸಂಜೆ ಹಾಜು ಪಡಿಸುವಂತೆ ಆದೇಶ ನೀಡಿದರು.
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ನಿರಂಜನ್ ಭಟ್‌ಗೆ ಚಿಕಿತ್ಸೆ ಒದಗಿಸುವ ಕುರಿತು ಆರೋಪಿ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದಾಗ ಅದಕ್ಕೆ ಒಪ್ಪಿದ ಅವರು, ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶ ನೀಡಿದರು. ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆಯೂ ಪೊಲೀಸರು ಆತನನ್ನು ವೈದ್ಯರ ತಪಾಸಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ತನಿಖೆಗಾಗಿ ಆರೋಪಿಗಳನ್ನು 15 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲು ಅವಕಾಶವಿದ್ದು, ಸಿಐಡಿ ತನಿಖೆ ಆರಂಭಕ್ಕಿಂತ ಮೊದಲು ಉಡುಪಿ ಪೊಲೀಸರು ನಿರಂಜನ್ ಭಟ್‌ನನ್ನು ನಾಲ್ಕು ದಿನ ಕಸ್ಟಡಿಗೆ ತೆಗೆದು ಕೊಂಡಿದ್ದರು. ಇದೀಗ ಸಿಐಡಿ ಪೊಲೀಸರು ಮತ್ತೆ ನಾಲ್ಕು ದಿನಕ್ಕೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಿಂದ ಹೊಳೆಯಲ್ಲಿ ಪತ್ತೆಯಾ ಗಿರುವ ಮೂಳೆಗಳು ಮನುಷ್ಯರದ್ದು ಎಂಬುದು ಧೃಢಪಟ್ಟಿರುವ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಮೂಳೆಗಳನ್ನು ಹೊಳೆಗೆ ಎಸೆದಿರುವ ನಿರಂಜನ್ ಭಟ್ ನನ್ನು ಕಸ್ಟಡಿಗೆ ತೆಗೆದುಕೊಂಡು ತೀವ್ರ ವಿಚಾರಣೆ ಒಳಪಡಿಸಿದ್ದಾರೆ. ಇಂದು ಆತನನ್ನು ನಂದಳಿಕೆಯ ಆತನ ಮನೆ ಹಾಗೂ ಮೂಳೆ ಎಸೆದಿರುವ ಕಲ್ಕಾರು ಹೊಳೆ ಪ್ರದೇಶಕ್ಕೆ ಸಿಐಡಿ ಪೊಲೀಸರು ಕರೆದೊಯ್ದು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಮಂಗಳೂರು ಕಾರಾಗೃಹದಲ್ಲಿರುವ ರಾಜೇಶ್ವರಿ ಶೆಟ್ಟಿ ಹಾಗೂ ನವನೀತ್ ಶೆಟ್ಟಿ ಮತ್ತು ಹಿರಿಯಡ್ಕ ಜೈಲಿನಲ್ಲಿರುವ ಸಾಕ್ಷನಾಶ ಆರೋಪಿ ಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರ ನ್ಯಾಯಾಂಗ ಬಂಧನ ಅವಧಿ ಸೆ.19ರಂದು ಮುಗಿಯಲಿದ್ದು, ಅಂದು ಇವರನ್ನು ಬೆಳಗ್ಗೆ ಹಾಗೂ ಸಿಐಡಿ ಕಸ್ಟಡಿಯಲ್ಲಿರುವ ನಿರಂಜನ್ ಭಟ್‌ನನ್ನು ಸಂಜೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಸಾಕ್ಷನಾಶ ಆರೋಪಿಗಳ ಜಾಮೀನಿಗೆ ಅರ್ಜಿ
ಪ್ರಕರಣದ ಸಾಕ್ಷ ನಾಶಪಡಿಸಿರುವ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರ ಜಾಮೀನಿಗಾಗಿ ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು.
ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರ ನ್ಯಾಯಾ ಲಯದಲ್ಲಿ ಆ.18ರಂದು ಸಲ್ಲಿಸಲಾಗಿದ್ದ ಇವರ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ರಾಜೇಶ್ ಕರ್ಣಂ ಆ.29ರಂದು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪರ ವಕೀಲ ವೈ.ವಿಕ್ರಂ ಹೆಗ್ಡೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಈ ಪ್ರಕರಣದ ಕುರಿತು ಸಿಐಡಿಯಿಂದ ಮಾಹಿತಿ ಪಡೆದುಕೊಳ್ಳಲು ಒಂದು ವಾರದ ಕಾಲಾವಕಾಶ ನೀಡುವಂತೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ, ಜಿಲ್ಲಾ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಅವರಲ್ಲಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಅವರು ಈ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿ ಆದೇಶ ನೀಡಿದರು.







