ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ: ಮಧು ಬಂಗಾರಪ್ಪ
ವಿಶ್ವಕರ್ಮ ಜಯಂತಿ

ಸೊರಬ, ಸೆ.17: ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹ ತಮ್ಮ ಕೌಶಲ್ಯಗಳ ಮೂಲಕ ವಿಶ್ವಕ್ಕೆ ಕೊಡುಗೆಯನ್ನು ನೀಡಿದವರು ವಿಶ್ವಕರ್ಮಿಯರು ಎಂದು ಶಾಸಕ ಮಧುಬಂಗಾರಪ್ಪ ಅಭಿಪ್ರಾಯಿಸಿದರು. ಶನಿವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ, ವಿವಿಧ ಇಲಾಖೆಗಳು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಲನ್ನು ಶಿಲೆಯನ್ನಾಗಿಸಿ ಶಿಲ್ಪಕಲೆಗೆ ಮೆರುಗು ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾದ ಜಕಣಾಚಾರಿ ಅವರನ್ನು ಮೀರಿಸಲು ಯಾರಿದಂಲೂ ಸಾಧ್ಯವಿಲ್ಲ. ಅಂತೆಯೇ ನಮ್ಮ ನಡುವೆ ಇರುವ ವಿಶ್ವಕರ್ಮಿಯರು ಜಾತಿಭೆೇದವಿಲ್ಲದೆ ಸರ್ವ ಜನಾಂಗದವರಿಗೂ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ರಾಜ್ಯದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಮಹನೀಯರ ಹಿಂದೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ. ತಮ್ಮ ಕೌಶಲ್ಯಗಳ ಮೂಲಕವೇ ವೃತ್ತಿ ನಿರತರಾಗಿರುವರನ್ನು ಗೌರವದಿಂದ ಕಾಣಬೇಕು ಎಂದರು. ಇಲಾಖಾ ಅಧಿಕಾರಿಗಳು ಸೇರಿದಂತೆ ಸರ್ವರ ಸಮ್ಮುಖದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ವಿಶ್ವಕರ್ಮ ಜಯಂತಿಯನ್ನು ರಜೆ ರಹಿತವಾಗಿ ಸರಕಾರದ ವತಿಯಿಂದ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು. ಹೊಸನಗರ ತಾಲೂಕಿನ ಚಿಕ್ಕಜೇನಿ ಸರಕಾರಿ ಪ್ರೌಢಶಾಲೆಯ ಡಾ. ಶಂಕರಶಾಸ್ತ್ರಿ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಿವಲಿಂಗೇಗೌಡ, ತಾಪಂ ಸದಸ್ಯರಾದ ಸುನೀಲ್‌ಗೌಡ, ನಾಗರಾಜ್, ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್, ವಿಶ್ವಕರ್ಮ ಸಮಾಜ ಅಧ್ಯಕ್ಷ ಷಣ್ಮುಖಾಚಾರ್, ಕಾರ್ಯದರ್ಶಿ ಮುರುಗೇಂದ್ರಾಚಾರ್, ಗೌರವಾಧ್ಯಕ್ಷ ದತ್ತಾತ್ರೇಯ ವಿಶ್ವಕರ್ಮ, ಪ್ರಮುಖರಾದ ಬಂಗಾರಪ್ಪ ಗೌಡ, ಕೇಶವಾಚಾರ್, ದೇವಕಿ ಆಚಾರ್, ಬಸವರಾಜ್ ಬಡಿಗೇರ್, ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್, ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಿ.ಎಸ್. ಪ್ರಸನ್ನಕುಮಾರ್, ಅಖಿಲ ಭಾರತ ಗುಡಿಗಾರ ಸಮಾಜದ ಅಧ್ಯಕ್ಷ ಎಂ.ಎನ್. ಗುರುಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.





