ಮಹಿಳಾ ದೌರ್ಜನ್ಯ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿ: ಕಲ್ಪನಾ ಶ್ರೀಕಾಂತ್
ಹುಣ್ಣಿಮೆ ಸಮಾರಂಭ

ಚಿಕ್ಕಮಗಳೂರು, ಸೆ.17: ಮಹಿಳಾ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ, ಕಿರುಕುಳ ತಪ್ಪಿಲ್ಲ. ಅಪರಾಧಿಗಳಿಗೆ ಮತ್ತಷ್ಟು ಕಠಿಣ ಶಿಕ್ಷೆ ವಿಧಿಸುವಂತಾಗಬೇಕೆಂದು ಸರಕಾರಿ ಅಭಿಯೋಜಕಿ ಕೆ.ಜಿ. ಕಲ್ಪನಾ ಶ್ರೀಕಾಂತ್ ಅಭಿಪ್ರಾಯಿಸಿದರು.
ಅವರು ಅಕ್ಕಮಹಾದೇವಿ ಮಹಿಳಾ ಸಂಘದ ರತ್ನಗಿರಿ ಬಡಾವಣೆಯ ಶರಣೆ ಮುಕ್ತಾಯಕ್ಕ ತಂಡ ಆಯೋಜಿಸಿದ್ದ ಹುಣ್ಣಿಮೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅನೇಕ ಕಟ್ಟುಪಾಡುಗಳು ಶೋಷಣೆಗೆ ಕಾರಣವಾಗುತ್ತಿದೆ. ಅನ್ಯಾಯವಾದಾಗ ಪ್ರತಿಭಟಿಸುವ, ದೂರು ನೀಡುವ ಧೈರ್ಯ ಮತ್ತು ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಆತ್ಮಬಲ ಹೆಚ್ಚಿಸಿಕೊಳ್ಳುವ ಮೂಲಕ ಸಂಘಟಿತರಾಗಬೇಕು ಎಂದು ಹೇಳಿದರು.
ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಾನೂನು ನೀಡಿದೆ. ವಿವಾಹವನ್ನು ಕಡ್ಡಾಯವಾಗಿ ನೋಂದಾಯಿಸುವುದರಿಂದ ಸ್ವಲ್ಪಮಟ್ಟಿನ ಭದ್ರತೆ ಸಿಗುತ್ತದೆ. ತಂದೆ ಹಾಗೂ ಪತಿಯ ಆಸ್ತಿಯಲ್ಲಿ ಮಹಿಳೆಗೂ ಸಮಾನ ಹಕ್ಕಿದೆ. 2005ರ ತಿದ್ದುಪಡಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದೆ ಎಂದ ಕಲ್ಪನಾ, ಕಾನೂನಿನ ಬಗ್ಗೆ ಮಹಿಳೆಯರು ಅರಿವು ಮೂಡಿಸಿಕೊಳ್ಳಬೇಕು ಎಂದು ನುಡಿದರು. ಹೆಣ್ಣು ಅಬಲೆ ಅಲ್ಲ ಸಬಲೆ. ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿ ಛಾಪು ಮೂಡಿಸಿದ್ದಾಳೆ. ವೇದಕಾಲದಲ್ಲೂ ಸಮಾನ ಅವಕಾಶ ಪಡೆದಿದ್ದ ಹೆಣ್ಣು, ಇತ್ತೀಚಿನ ವರ್ಷಗಳಲ್ಲಿ ವ್ಯತಿರಿಕ್ತ ಪರಿಣಾಮಗಳಿಂದ ಕುಗ್ಗಿದ್ದಾಳೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದ ಅವರು, ಆರ್ಥಿಕ ಸಬಲತೆಯತ್ತ ಹೆಣ್ಣುಮಕ್ಕಳು ಪ್ರಯತ್ನಶೀಲರಾಗಬೇಕು. ಮಾನವೀಯ ವೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರದ ಅರಿವು ಮೂಡಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಸುತ್ತು ಅಥವಾ ಕೋಶ ಓದು ಎನ್ನುವ ಮಾತಿನಂತೆ ಸುತ್ತಲಿನ ಬದುಕಿನ ಬಗ್ಗೆ ಅರಿವು ಮೂಡಿಸಿಕೊಳ್ಳಲು ಆಸಕ್ತಿ ವಹಿಸಬೇಕು. ಗೃಹ ಕೈಗಾರಿಕೆ ಹಾಗೂ ಕುಶಲ ಕಲೆಗಳ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದರು.
ತಂಡದ ಮುಖಂಡೆ ಸುಜಾತಾ ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಿಯ ವಚನ ಗಾಯನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಆಟೋಟ ಸ್ಪರ್ಧಾ ವಿಜೇತರಿಗೆ ಸುಜಾತಾ ಶಿವಮೂರ್ತಿ ಬಹುಮಾನ ವಿತರಿಸಿದರು. ಲತಾ ಮಹೇಶ್ ಅತಿಥಿಗಳನ್ನು ಪರಿಚಯಿಸಿದರು.
ಕಾರ್ಯದರ್ಶಿ ಹೇಮಲತಾ, ಖಜಾಂಚಿ ಯಮುನಾ ಸಿ.ಶೆಟ್ಟಿ, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ರೇಖಾ ಉಮಾಶಂಕರ್, ವನಜಾಕ್ಷಮ್ಮ ಶಿವರುದ್ರಯ್ಯ ವೇದಿಕೆಯಲ್ಲಿದ್ದರು. ಅಕ್ಕಮಹಾದೇವಿ ಮಹಿಳಾ ಸಂಘದ ಸದಸ್ಯರಾದ ಮಹೇಶ್ವರಿ ಸ್ವಾಗತಿಸಿ, ವೀಣಾ ಮತ್ತು ಪುಷ್ಪಾ ಕಾರ್ಯಕ್ರಮ ನಿರೂಪಿಸಿ ಪ್ರತಿಭಾ ವಂದಿಸಿದರು.







