ವೇದಿಕೆಯ ಭಯ ದೂರ ಮಾಡುವಲ್ಲಿ ಪ್ರತಿಭಾ ಪ್ರದರ್ಶನ ಸಹಕಾರಿ: ಲತಾ ಆರ್.ನಾಯಕ
ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ

ಅಂಕೋಲಾ, ಸೆ.17: ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಗೆಲುವುದಕ್ಕಿಂತ ಅದರಲ್ಲಿ ಭಾಗವಹಿಸಿವುದು ಮುಖ್ಯ. ಈ ನಿಟ್ಟಿನಲ್ಲಿ ಅವರು ಪ್ರತಿಭೆಗಳನ್ನು ಪ್ರದರ್ಶಿಸುವುದರ ಮೂಲಕ ವೇದಿಕೆಯ ಭಯ ವಾತಾವರಣವನ್ನು ದೂರ ಮಾಡಬಹುದು ಎಂದು ಹಿಮಾಲಯ ಎಜುಕೇಶನ್ ಮ್ಯಾನೆಜಿಂಗ್ ಟ್ರಸ್ಟಿಗಳಾದ ಲತಾ ಆರ್.ನಾಯಕ ಮಾತನಾಡಿದರು.
ಹಿಮಾಲಯ ಕಾಲೇಜು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸದ 2016-17ನೆ ಸಾಲಿನ ಪ.ಪೂ ಕಾಲೇಜಿನ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಮುಖ್ಯಾಧ್ಯಾಪಕ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ಮನುಷ್ಯನು ಸಹೃದಯಿಯಾಗಬೇಕಾದರೆ ಸಾಂಸ್ಕೃತಿಕ ಮನಸ್ಸನ್ನು ಅಳವಡಿಸಿಕೊಳ್ಳಬೇಕು. ವ್ಯಕ್ತಿಯ ಆತ್ಮ ವಿಶ್ವಾಸವೇ ಆತನನ್ನು ಬೆಳೆಸುವುದು. ಹಿಮಾಲಯ ಶಿಕ್ಷಣ ಸಂಸ್ಥೆ ಇನ್ನಿತರ ಶಿಕ್ಷಣ ಸಂಸ್ಥೆಗೆ ಮಾದರಿಯಾಗಿ ಬೆಳೆಯಲಿ ಎಂದು ಹಾರೈಸಿದರು. ನಿವೃತ್ತ ಮುಖ್ಯೋಧ್ಯಾಪಕ ಗೌತಮ ಗಾಂವಕರ ಮಾತನಾಡಿ, ಬದುಕಿನಲ್ಲಿ ಶಿಸ್ತಿನ ಆವಶ್ಯಕತೆ ಮತ್ತು ಸಂಸ್ಕೃತಿಯ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಧ್ಯಾಪಕಿ ಡಾ.ಗೀತಾ ನಾಯಕ ಮಾತನಾಡಿ, ಕಾಲೇಜ್ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳು ಸುಪ್ತವಾಗಿ ಅಡಗಿರುತ್ತವೆ. ಪ್ರತಿಭೆಯನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆಗಳು ಬೇಕು ಎಂದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕಿನ 8 ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ನಮೃತಾ ಹೆಗಡೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಜಿ.ಆರ್.ನಾಯಕ ಸ್ವಾಗತಿಸಿದರು, ಉಪನ್ಯಾಸಕ ಮಂಜುನಾಥ ನಾಯಕ ನಿರೂಪಿಸಿ, ವಂದಿಸಿದರು.





