ಕಡಲಕೆರೆ : ಸ್ಮಶಾನ ಭೂಮಿ ಅಕ್ರಮ ಪರಭಾರೆ ವಿವಾದ ಸ್ಥಳ ಪರಿಶೀಲನೆಗೆ ಬಾರದ ಅಧಿಕಾರಿಗಳು
ಸ್ಮಶಾನದಲ್ಲೇ ಕಾದು ಕುಳಿತ ಸಂತ್ರಸ್ತರು

ಮೂಡುಬಿದಿರೆ,ಸೆ.17 : ಇಲ್ಲಿನ ಕಡಲಕೆರೆ ಸಮೀಪದಲ್ಲಿರುವ ಸರ್ವೆ ನಂಬ್ರ 156/1ರಲ್ಲಿರುವ ಮೊಗೇರ ಸಮುದಾಯಕ್ಕೆ ಸೇರಿದ 1.20 ಎಕ್ರೆ ಸ್ಮಶಾನ ಭೂಮಿಯನ್ನು ಪರಭಾರೆ ಮಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಶನಿವಾರ ಸ್ಥಳ ಪರಿಶೀಲನೆಗೆ ಭೇಟಿ ನೀಡಲಿದ್ದಾರೆಂಬ ಮಾಹಿತಿಯ ಮೇರೆಗೆ ಸಂತ್ರಸ್ಥರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕಾದು ಕುಳಿತರೂ ಅಕ್ರಮ ಸಕ್ರಮ ಸಮಿತಿ ಮತ್ತು ಅಧಿಕಾರಿಗಳು ಬಾರದೆ ಸ್ಥಳ ಪರಿಶೀಲನೆಯನ್ನು ಮುಂದೂಡಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ಮಾರ್ಪಾಡಿ ಗ್ರಾಮದ ನಾಗರಕಟ್ಟೆ ಬಳಿ ಇರುವ ಮೊಗೇರ ಸಮುದಾಯದವರು ಹಲವಾರು ವರ್ಷಗಳಿಂದ ಬಳಕೆ ಮಾಡುತ್ತಿದ್ದ ಸ್ಮಶಾನ ಭೂಮಿಯನ್ನು ಬಾಬ್ ಸಾಹೇಬ್ ಎಂಬವರಿಗೆ ಕಾರ್ಕಳ ಅಕ್ರಮ-ಸಕ್ರಮ ಸಮಿತಿಯು 1994-95ರಲ್ಲಿ ಅಕ್ರಮವಾಗಿ ಮಂಜೂರು ಮಾಡಿದೆ ಎನ್ನುವ ಆರೋಪವಿದೆ. ಅಕ್ರಮವಾಗಿ ಮಂಜೂರಾದ ಈ ಭೂಮಿಯನ್ನು ರದ್ದು ಮಾಡುವಂತೆ ಮೊಗೇರ ಸಮುದಾಯದವರು ಮಂಗಳೂರು ಸಹಾಯ ಆಯುಕ್ತರಿಗೆ ದೂರು ನೀಡಿದ್ದರು. ಈ ಬಗ್ಗೆ 2007ರಲ್ಲಿ ಆಗಿನ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದಾಗ ಶವ ಸಂಸ್ಖಾರ ನಡೆಸಿದ್ದ ಕುರುಹುಗಳು ಪತ್ತೆಯಾಗಿದ್ದವು.
ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಏಸಿ ಕೋರ್ಟ್ ಬಾಬ್ ಸಾಹೇಬರಿಗೆ ಅಕ್ರಮ-ಸಕ್ರಮ ಸಮಿತಿ ಮಾಡಿದ ಭೂ ಮಂಜೂರಾತಿ ಆದೇಶವನ್ನು ರದ್ದು ಪಡಿಸಿತ್ತು. ಅದರ ವಿರುದ್ಧ ಬಾಬ್ ಸಾಹೇಬ್ 2014ರಲ್ಲಿ ಜಿಲ್ಲಾಧಿಕಾರಿ ಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡಿತ್ತು. 2015ರಲ್ಲಿ ಮತ್ತೆ ಅವರು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಡೀಸಿ ಕೋರ್ಟ್ ಪ್ರಕರಣದ ಮರುವಿಚಾರಣೆಗಾಗಿ ಮೂಡುಬಿದಿರೆ ಅಕ್ರಮ-ಸಕ್ರಮ ಸಮಿತಿಗೆ ಹಿಂತಿರುಗಿಸಿ ಆದೇಶ ನೀಡಿತ್ತು. ಈ ಬಗ್ಗೆ ಮೂಡುಬಿದಿರೆ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಕೆಲವು ಬಾರಿ ವಿಚಾರಣೆ ನಡೆದು ಇತ್ತಂಡಗಳಿಂದ ಹೇಳಿಕೆಗಳನ್ನು ಪಡೆದುಕೊಂಡಿತ್ತು.
ಈ ನಿಟ್ಟಿನಲ್ಲಿ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಪಿ.ಕೆ ತೋಮಸ್ ನೇತೃತ್ವದ ಸಮಿತಿಯ ತಂಡವು ವಸ್ತು ಸ್ಥಿತಿ ಅಧ್ಯಯನಕ್ಕಾಗಿ ಶನಿವಾರದಂದು ಬೆಳಿಗ್ಗೆ ವಿವಾದಿತ ಜಾಗಕ್ಕೆ ಭೇಟಿ ಕೊಡಲಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಸಂತ್ರಸ್ತರು ಬೆಳಿಗ್ಗೆಯಿಂದ ವಿವಾದಿತ ಜಾಗದಲ್ಲಿ ಕಾದು ಕುಳಿತುಕೊಂಡಿದ್ದರು. ಸಂತ್ರಸ್ತರ ಪರವಾಗಿ ಹರೀಶ್ ಅವರು ತಹಶೀಲ್ದಾರ್ ಮತ್ತು ಸಮಿತಿಯವರನ್ನು ಕರೆದುಕೊಂಡು ಬರಲು ತೆರಳಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ವಿವಾದಿತ ಸ್ಥಳಕ್ಕೆ ಹರೀಶ್ ಅವರೊಬ್ಬರೇ ಮರಳಿ ಬಂದಿದ್ದು. ಅವರಲ್ಲಿ ಸಂತ್ರಸ್ತರು ವಿಚಾರಿಸಿದಾಗ ತಹಶೀಲ್ದಾರ್ ಕಛೇರಿಯಲ್ಲಿಯೇ ಮಾತುಕತೆಗಳು ನಡೆದಿದ್ದು.ಅಕ್ರಮ-ಸಮಿತಿಯವರು ವಿವಾದಿತ ಜಾಗದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನವನ್ನು ಮಾಡಿ ನಂತರ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆಂದು ಮಾಹಿತಿ ನೀಡಿದ ನಂತರ ಸಂತ್ರಸ್ತರೆಲ್ಲರೂ ತಮ್ಮ ಮನೆಯತ್ತ ಸಾಗಿದರು.







