ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್‌ಗೆ ಭವ್ಯ ಸ್ವಾಗತ

ಹೊಸದಿಲ್ಲಿ, ಸೆ.17: ಭಾರತದ ಪ್ಯಾರಾಲಿಂಪಿಕ್ಸ್ ಅಥ್ಲೀಟ್ ದೀಪಾ ಮಲಿಕ್ ಶನಿವಾರ ಸ್ವದೇಶಕ್ಕೆ ವಾಪಸಾಗಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ದೀಪಾ ಮಲಿಕ್‌ರನ್ನು ಹೊಸದಿಲ್ಲಿಯ ಟಿ-3 ಏರ್‌ಪೋರ್ಟ್‌ನಲ್ಲಿ ಅವರ ಕುಟುಂಬ ಸದಸ್ಯರು, ಹರ್ಯಾಣ ಕ್ರೀಡಾ ಸಚಿವರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು.
ಜಾನಪದ ನೃತ್ಯಗಾರರು ನೃತ್ಯದ ಮೂಲಕ ಮಲಿಕ್‌ರನ್ನು ಸ್ವಾಗತಿಸಿದರು. ದೀಪಾರನ್ನು ಬಿಗಿ ಭದ್ರತೆಯಲ್ಲಿ ಏರ್‌ಪೋರ್ಟ್‌ನಿಂದ ಕಾದು ನಿಂತಿದ್ದ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ದೀಪಾರ ತಂದೆ ಕರ್ನಲ್ ಬಿಕೆ ನಾಗ್ಪಾಲ್ ಹಾಗೂ ದೀಪಾರ ಪುತ್ರಿ ಉಪಸ್ಥಿತರಿದ್ದರು.
ದೀಪಾ ಪ್ಯಾರಾಲಿಂಪಿಕ್ಸ್‌ನಲ್ಲಿ ಶಾಟ್‌ಪುಟ್ ಎಫ್-53 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ದೀಪಾ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ತನಗೆ ಭವ್ಯ ಸ್ವಾಗತ ನೀಡಿದ ಇಂಡಿಯನ್ ಆರ್ಮಿಗೆ, ಹಿತೈಷಿಗಳಿಗೆ ಹಾಗೂ ಅಭಿಮಾನಿಗಳಿಗೆ ದೀಪಾ ಕೃತಜ್ಞತೆ ಸಲ್ಲಿಸಿದರು.
ಭಾರತ ಈ ಬಾರಿಯ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 4 ಪದಕ ಗೆದ್ದುಕೊಂಡಿದೆ. ಮಾರಿಯಪ್ಪನ್ ತಂಗವೇಲು ಹಾಗು ವರುಣ್ ಸಿಂಗ್ ಭಾಟಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕವನ್ನು ಜಯಿಸಿದ ಬಳಿಕ ದೀಪಾ ಮಲಿಕ್ ಭಾರತಕ್ಕೆ ಮೂರನೆ ಪದಕ ಗೆದ್ದುಕೊಟ್ಟಿದ್ದರು. ತನ್ನ ಆರನೆ ಪ್ರಯತ್ನದಲ್ಲಿ 4.61 ಮೀ.ದೂರಕ್ಕೆ ಶಾಟ್‌ಪುಟ್‌ನ್ನು ಎಸೆದಿದ್ದ ದೀಪಾ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದರು.







