ಚೊಚ್ಚಲ ಪಂದ್ಯ ಆಡಲು ಇಂಗ್ಲೆಂಡ್‌ನ ಹಮೀದ್ ಸಜ್ಜು
ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ

ನಾಟಿಂಗ್‌ಹ್ಯಾಮ್, ಸೆ.17: ಬಾಂಗ್ಲಾದೇಶ ಪ್ರವಾಸಕ್ಕೆ ಆಯ್ಕೆ ಮಾಡಲಾಗಿರುವ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಲಂಕಾಶೈರ್‌ನ ಆರಂಭಿಕ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ ಚೊಚ್ಚಲ ಪಂದ್ಯ ಆಡಲು ಸಜ್ಜಾಗಿದ್ದಾರೆ.
ಮುಂದಿನ ತಿಂಗಳು ಚಿತ್ತಗಾಂಗ್‌ನಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ 11ರ ಬಳಗದಲ್ಲಿ 19ರ ಹರೆಯದ ಹಮೀದ್ ಆಯ್ಕೆಯಾದರೆ, ಇಂಗ್ಲೆಂಡ್‌ನ ಪರ ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಆರನೆ ಆಟಗಾರನಾಗಿದ್ದಾರೆ.
ಇದೇ ವೇಳೆ 39ರ ಹರೆಯದ ಗಾರೆತ್ ಬ್ಯಾಟ್ಟಿ ಅವರನ್ನು ತಂಡಕ್ಕೆ ವಾಪಸ್ ಕರೆಸಲಾಗಿದೆ. ಈವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿರುವ ಗಾರೆತ್ 11 ವರ್ಷಗಳ ಹಿಂದೆ ಇಂಗ್ಲೆಂಡ್ ಪರ ಆಡಿದ್ದರು. ಪ್ರಸ್ತುತ ಇಂಗ್ಲೆಂಡ್ ಋತುವಿನಲ್ಲಿ ಆಟಗಾರರ ಯಶಸ್ಸಿಗೆ ವಯಸ್ಸು ಅಡ್ಡಿಯಾಗುತ್ತಿಲ್ಲ.
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಲಂಕಾಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಹಮೀದ್ 15 ಪ್ರಥಮ ಡಿವಿಜನ್ ಪಂದ್ಯಗಳಲ್ಲಿ 52.45ರ ಸರಾಸರಿಯಲ್ಲಿ 4 ಶತಕಗಳ ಸಹಿತ 1,154 ರನ್ ಗಳಿಸಿದ್ದಾರೆ. ಸರ್ರೆ ತಂಡದ ನಾಯಕ ಗಾರೆತ್ ಬಾಟ್ಟಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ 41 ವಿಕೆಟ್ ಕಬಳಿಸಿದ್ದಾರೆ.
ಭದ್ರತಾ ಭೀತಿಯ ಕಾರಣದಿಂದ ಅಲೆಕ್ಸ್ ಹೇಲ್ಸ್ ಬಾಂಗ್ಲಾ ಪ್ರವಾಸದಿಂದ ಹಿಂದೆ ಸರಿದಿರುವ ಕಾರಣ ಅಗ್ರ ಕ್ರಮಾಂಕದಲ್ಲಿ ಇಂಗ್ಲೆಂಡ್‌ನ ನಾಯಕ ಅಲೆಸ್ಟೈರ್ ಕುಕ್‌ರೊಂದಿಗೆ ಹಮೀದ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.
ಭಾರತ ಮೂಲದ ಹಮೀದ್ ನಾರ್ತ್‌ವೆಸ್ಟ್ ಇಂಗ್ಲೆಂಡ್‌ನ ಬೊಲ್ಟನ್‌ನಲ್ಲಿ ನೆಲೆಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡ
ಅಲೆಸ್ಟೈರ್ ಕುಕ್(ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಝಾಫರ್ ಅನ್ಸಾರಿ, ಜಾನಿ ಬೈರ್‌ಸ್ಟೋ, ಗ್ಯಾರಿ ಬ್ಯಾಲನ್ಸ್, ಗಾರೆತ್ ಬ್ಯಾಟ್ಟಿ, ಸ್ಟುವರ್ಟ್ ಬ್ರಾಡ್, ಜೊಸ್ ಬಟ್ಲರ್, ಬೆನ್ ಡಕೆಟ್, ಸ್ಟೀವನ್ ಫಿನ್, ಹಸೀಬ್ ಹಮೀದ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್‌ವುಡ್.







