ನಾನೊಬ್ಬ ಶಿಸ್ತಿನ ಸ್ವಯಂಸೇವಕ: ಪಾರಿಕ್ಕರ್
ಪಣಜಿ, ಸೆ.17: ಚುನಾವಣೆ ನಡೆಯಲಿರುವ ಗೋವಾದಲ್ಲಿ ಬಂಡುಕೋರ ಆರೆಸ್ಸೆಸ್ ನಾಯಕ ಸುಭಾಷ್ ವೆಲಿಂಗ್ಕರ್ ರಾಜ ಕೀಯ ಪಕ್ಷವೊಂದನ್ನು ಸ್ಥಾಪಿಸಲಿರುವ ವಿಚಾರವನ್ನು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಇಂದು ಲಘು ಮಾಡಿದ್ದಾರೆ.
ಇಲ್ಲಿ ಹಲವಾರು ಪಕ್ಷಗಳಿವೆ. ಎಎಪಿ ಇದೆ. ಇದು ಪ್ರಜಾಪ್ರಭುತ್ವವಾಗಿದೆ. ಯಾರು ಬೇಕಾದರೂ ಪಕ್ಷ ಕಟ್ಟಬಹುದು ಎಂದು ಅವರು ಹೇಳಿದರು. ಗೋವಾದ ಆರೆಸ್ಸೆಸ್‌ನಲ್ಲಿ ನಡೆಯುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಲು ಪಾರಿಕ್ಕರ್ ನಿರಾಕರಿಸಿದರಾದರೂ, ತಾನೊಬ್ಬ ‘ಶಿಸ್ತಿನ ಸ್ವಯಂಸೇವಕ’ ಎಂದರು.
ತಾನೊಬ್ಬ ಸ್ವಯಂ ಸೇವಕ. ತಾನು ಆರೆಸ್ಸೆಸನ್ನು ಅನುಸರಿಸುತ್ತೇನೆ. ಆರೆಸ್ಸೆಸನ್ನು ಅನುಸರಿಸಬೇಕಾದರೆ ನೀವು ಶಾಖೆಗೆ ಹೋಗಬೇಕಾಗುತ್ತದೆಂದು ಗೋವಾ ಆರೆಸ್ಸೆಸ್‌ನಲ್ಲಿ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಅವರು ಪತ್ರಕರ್ತರಿಗಿಲ್ಲಿ ತಿಳಿಸಿದರು.
ತನಗೆ ಎಲ್ಲಕ್ಕಿಂತ ಶಿಸ್ತು ಮುಖ್ಯವಾದುದು. ತಾನು ಶಿಸ್ತನ್ನು ಅನುಸರಿಸಿದ್ದೇನೆ ಹಾಗೂ ಅದರ ಅನುಸರಣೆಯನ್ನು ಮುಂದುವರಿಸುತ್ತೇನೆ. ತಮಗೆ ಆರೆಸ್ಸೆಸ್‌ನ ಕುರಿತು ಯಾವುದೇ ವಿವರ ಬೇಕಾದಲ್ಲಿ ಆರೆಸ್ಸೆಸನ್ನೇ ಸಂಪರ್ಕಿಸಬೇಕೆಂದು ಪಾರಿಕ್ಕರ್ ಹೇಳಿದರು.





